ರಾಂಚಿ,ಮೇ6- ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮನೆಯ ಮೇಲೆ ಜಾರಿನಿರ್ದೇಶನಾಲಯ(ಇಡಿ) ದಾಳಿ ನಡೆಸಿದ್ದು, ಸುಮಾರು 30 ಕೋಟಿಗೂ ಆಧಿಕ ನಗದು ಪತ್ತೆ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಇಡಿ ಅಧಿ ಕಾರಿಗಳು ನಡೆಸಿರುವ ಅತೀ ದೊಡ್ಡ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ.ರಾಂಚಿಯ ಸೈಲ್ ಸಿಟಿ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ತನಿಖಾ ಸಂಸ್ಥೆ ಏಕಕಾಲದಲ್ಲಿ ದಾಳಿ ನಡೆಸಿತ್ತು.
ಇಡಿಯ ಒಂದು ತಂಡ ಇಂದು ಬೆಳಗ್ಗೆ ರಸ್ತೆ ನಿರ್ಮಾಣ ವಿಭಾಗದ ಇಂಜಿನಿಯರ್ ವಿಕಾಸ್‌ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿತ್ತು. ಇನ್ನೊಂದು ತಂಡ ಬರಿಯಾತು, ಮೊರಬದಿ ಮತ್ತು ಬೋಡಿಯಾ ಪ್ರದೇಶಗಳಲ್ಲಿ ದಾಳಿ ನಡೆಸಿದೆ.
ಸುಮಾರು 30 ಕೋಟಿ ಹಣ ಇರಬಹುದು ಎಂದು ಅಧಿ ಕಾರಿಗಳು ಅಂದಾಜಿಸಿದ್ದಾರೆ. ಮನೆಯಲ್ಲಿನ ಬ್ಯಾಗ್, ಕಮೋಡ್, ಅಲ್ಮೇರಾಗಳಲ್ಲಿ ಸಿಕ್ಕ ಹಣವನ್ನು ಎಣಿಕೆ ಮಾಡಲು ಜಾರಿ ನಿರ್ದೇಶನಾಲಯ ಅಧಿ ಕಾರಿಗಳು ಒಂದು ಕಡೆ ರಾಶಿ ಹಾಕಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಇಡಿ ತನಿಖೆ ನಡೆಸುತ್ತಿರುವ ವೀರೇಂದ್ರ.ಕೆ ರಾಮ್ ಪ್ರಕರಣದ ಹಣ ಇದಾಗಿದೆ ಎಂದು ಜಾರಿನಿರ್ದೇಶನಾಲಯ ತಿಳಿಸಿದೆ.ಜಾರ್ಖಂಡ್‌ನಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದ ವೀರೇಂದ್ರ. ಕೆ ರಾಮ್ ಅವರು 100 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ ಆರೋಪವಿದೆ.
ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಆಗಿದ್ದ ಇವರನ್ನು ಫೆಬ್ರವರಿ 2023ರಲ್ಲಿ ಇಡಿ ಬಂಧಿಸಿತ್ತು. ಕೆಲವು ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮ ಎಸಗಲು ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಬಂಧಿಸಲಾಗಿತ್ತು.
ಜಾರ್ಖಂಡ್‌ನ ಕೆಲವು ರಾಜಕಾರಣಿಗಳೊಂದಿಗಿನ ವ್ಯವಹಾರದ ವಿವರಗಳನ್ನು ಹೊಂದಿದ್ದ ಪೆನ್‌ಡ್ರೈವ್‌ನ್ನು ವೀರೇಂದ್ರ.ಕೆ ರಾಮ್‌ನಿಂದ ವಶಪಡಿಸಿಕೊಳ್ಳಲಾಗಿದೆ.
ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ವ್ಯಾಪಕ ಭ್ರಷ್ಟಾಚಾರ ಎಸಗಿರುವ ಗಂಭೀರ ಆರೋಪಗಳು ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಇವರ ಮೇಲಿವೆ. ಇದೇ ಪ್ರಕರಣದಲ್ಲಿ ಇಡಿ ಮತ್ತಷ್ಟು ತನಿಖೆ ಕೈಗೊಂಡಿದೆ.
ಈ ದಾಳಿಯ ಬಗ್ಗೆ ಮಾತನಾಡಿದ ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಶಾಹದೇವ್, ಜಾರ್ಖಂಡ್‌ನಲ್ಲಿ ಭ್ರಷ್ಟಾಚಾರ ಕೊನೆಗೊಳ್ಳುತ್ತಿಲ್ಲ, ಈ ಹಣಗಳನ್ನು ಇವರು ಚುನಾವಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.