ಬೆಂಗಳೂರು,ಅ.13- ಖಚಿತ ಮಾಹಿತಿ ಮೇರೆಗೆ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಹಾಗೂ ಮಾಜಿ ಕಾಪೊರೇಟರ್ ಪತಿ ಮನೆ ಮೇಲೆ ಮಿಂಚಿನ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 42 ಕೋಟಿ ನಗದು ಪತ್ತೆಹಚ್ಚಿದ್ದಾರೆ. ಇತ್ತೀಚಿನ ವರ್ಷಗಳಲ್ಲೇ ಇದು ಐಟಿಯ ಅತಿದೊಡ್ಡ ದಾಳಿ ಇದಾಗಿದ್ದು , ದಾಳಿಯ ವೇಳೆ ಸಿಕ್ಕಿರುವ ಕಂತೆ ಕಂತೆ ನೋಟುಗಳನ್ನು ಕಂಡು ಸ್ವತಃ ಅಧಿಕಾರಿಗಳೇ ದಂಗಾಗಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯೆ ಅಶ್ವಥಮ್ಮ ಅವರ ಮನೆ ಮೇಲೆ ನಿನ್ನೆ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದೇ ಸಂದರ್ಭದಲ್ಲಿ ಆರ್‍ಟಿನಗರದ ಆತ್ಮಾನಂದ ಫ್ಲಾಟ್ ಮೇಲೆ ಅಶ್ವಥಮ್ಮ ಅವರ ಬಾಮೈದ ಪ್ರದೀಪ್‍ಗೆ ಸೇರಿದ ಫ್ಲಾಟ್‍ನಲ್ಲಿ ದಾಳಿ ನಡೆಸಿದ ವೇಳೆ ಮಂಚದ ಕೆಳಗೆ 23 ಬಾಕ್ಸ್‍ನಲ್ಲಿ ಸಂಗ್ರಹಿಸಿಟ್ಟಿದ್ದ 500 ರೂ. ಮುಖಬೆಲೆಯ ಒಟ್ಟು 42 ಕೋಟಿ ನಗದನ್ನು ಪತ್ತೆ ಮಾಡಿದ್ದಾರೆ. ಅಂಬಿಕಾಪತಿಯ ಪುತ್ರಿಯ ಆರ್‍ಟಿನಗರದಲ್ಲಿರುವ ವೈಟ್‍ಹೌಸ್ ಫ್ಲಾಟ್ ಮೇಲೂ ಐಟಿ ದಾಳಿ ನಡೆಸಿದೆ. ಮತ್ತೊಂದು ಪ್ರಕರಣದಲ್ಲಿ ಗುತ್ತಿಗೆದಾರ ಹೇಮಂತ್ ಅವರ ಬನಶಂಕರಿ ನಿವಾಸದ ಮೇಲೂ ದಾಳಿ ಮಾಡಲಾಗಿದೆ.
ಸದ್ಯಕ್ಕೆ ಪತ್ತೆಯಾಗಿರುವ ಕೋಟ್ಯಂತರ ಹಣ ಯಾರಿಗೆ ಸೇರಿದ್ದು, ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಫ್ಲಾಟ್ ಯಾರ ಒಡೆತನಕ್ಕೆ ಸೇರಿದೆ, ಹಣದ ಮೂಲ ಯಾವುದು, ಎಲ್ಲಿಗೆ ಸಂಗ್ರಹಿಸಲಾಗುತಿತ್ತು ಎಂಬುದರ ಬಗ್ಗೆ ಯಾವ ಗುಟ್ಟನ್ನು ಐಟಿ ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಇಷ್ಟು ದೊಡ್ಡ ಮೊತ್ತದ ಹಣವನ್ನು ಕಾರಿನ ಮೂಲಕ ಚೆನ್ನೈನಿಂದ ತೆಲಂಗಾಣಕ್ಕೆ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸಲಾಗುತ್ತಿತ್ತು.
ಇಸ್ರೇಲ್-ಹಮಾಸ್ ಯುದ್ಧ, ದೆಹಲಿಯಲ್ಲಿ ಬಿಗಿ ಬಂದೋಬಸ್ತ್
ಐಟಿ ಅಧಿಕಾರಿಗಳು ದಾಳಿ ನಡೆಸುವ ಒಂದು ಗಂಟೆಗೂ ಮುನ್ನ ಇದೇ ಫ್ಲಾಟ್‍ನಿಂದ 15 ಕೋಟಿ ಹಣವನ್ನು ಸಾಗಿಸಲಾಗಿತ್ತು. ಇನ್ನು ಒಂದೇ ಒಂದು ಗಂಟೆ ತಡವಾಗಿದ್ದರೂ ಈಗ ಪತ್ತೆಯಾಗಿರುವ ನಗದು ಕೂಡ ಅಲ್ಲಿಂದ ಬೇರೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸಲಾಗಿತ್ತು. ಇದೀಗ ಐಟಿ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹಾಗೂ ಮಾಜಿ ಬಿಬಿಎಂಪಿ ಸದಸ್ಯೆ ಅಶ್ವಥಮ್ಮ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಬ್ಯಾಂಕ್ ಖಾತೆಗಳು, ಚಿರ-ಚರಾಸ್ತಿಗಳು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ದಾಳಿ ನಡೆಸಿದ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆಯಲಾಗಿತ್ತು. ಒಂದೇ ಒಂದು ಸಣ್ಣ ಸುಳಿವನ್ನೂ ಸಹ ನೀಡದೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.ದಾ ಳಿಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ಬಳಕೆಯಾಗದ 2000 ಮುಖ ಬೆಲೆಯ ನೋಟುಗಳು ಸಹ ಪತ್ತೆಯಾಗಿದೆ.