ಬೆಂಗಳೂರು,ಡಿ.25– ರಾಜಧಾನಿ ಬೆಂಗಳೂರಿನ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ 10ರಿಂದ 15 ಸಾವಿರ ಮತದಾರರನ್ನು ಅಕ್ರಮವಾಗಿ ಸರ್ಕಾರ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನದಿನಾಚರಣೆ ಅಂಗವಾಗಿ ಮಹಾಲಕ್ಷಿಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರವೇ ಮುಂದೆ ನಿಂತು ಮತದಾರರ ಪಟ್ಟಿಗೆ ನಕಲಿ ಹೆಸರುಗಳನ್ನು ಸೇರಿಸಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ರೀತಿ ಹೊಸದಾಗಿ 10ರಿಂದ 15 ಸಾವಿರ ಹೆಸರುಗಳು ಸೇರ್ಪಡೆಯಾಗಿವೆ. ಚುನಾವಣಾ ಆಯೋಗ ಇದರ ಬಗ್ಗೆ ಗಮನಹರಿಸಬೇಕೆಂದು ಮನವಿ ಮಾಡಿದರು.
ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ವೋಟ್ ಚೋರಿ ಆರೋಪ ಮಾಡುವ ಮೂಲಕ ಬಿಜೆಪಿಗೆ ಕಳಂಕ ತರುವ ಯತ್ನ ಮಾಡುತ್ತಿದೆ. ಇದರ ಬಗ್ಗೆ ನಾವೆಲ್ಲರೂ ದನಿ ಎತ್ತಬೇಕು. ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕೆಂದು ಕಾರ್ಯಕರ್ತರಿಗೆ ಕರೆಕೊಟ್ಟರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲ. ಏಕೆಂದರೆ ಅವರಿಗೆ ವಾಜಪೇಯಿ ಅವರು ಪ್ರೇರಣೆ. ಇವರ ನೇತೃತ್ವದ ಎನ್‌ಡಿಎ ಸರ್ಕಾರ ಭ್ರಷ್ಟಾಚಾರ ರಹಿತ ಸರ್ಕಾರವಾಗಿದೆ. ದೇಶದಲ್ಲಿರುವ ಯಾವುದೇ ವಿರೋಧ ಪಕ್ಷಗಳು ನಮ ಸರ್ಕಾರದ ಬಗ್ಗೆ ಭ್ರಷ್ಟಾಚಾರದ ಆರೊಪ ಮಾಡಲು ಸಾಧ್ಯವಿಲ್ಲ ಎಂದರು.
ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಸ್ವಂತ ಶಕ್ತಿ ಮೇಲೆ ಗೆದ್ದು ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನದಿನ. ಇಡೀ ದೇಶ ಸಂಭ್ರಮಪಡುತ್ತಿದೆ. ಶಿಕ್ಷಣ ವ್ಯವಸ್ಥೆ ಸುಧಾರಣೆ, ಗ್ರಾಮೀಣ ರಸ್ತೆ ಗಳ ನಿರ್ಮಾಣ ಕಾರ್ಗಿಲ್ ಯುದ್ಧ ಗೆಲುವು ಸೇರಿ ಅನೇಕ ಕಾರ್ಯಕ್ರಮ ಗಳನ್ನು ಕೊಟ್ಟಿದ್ದಾರೆ. ಅಂತಹ ನಾಯಕರನ್ನು ನೆನೆಯುವುದು ನಮ ಕರ್ತವ್ಯ ಎಂದು ಸರಿಸಿದರು.
ರಾಜ್ಯದಲ್ಲಿ ಡ್ರಗ್ಸ್ ಮಾಫಿಯ ಹೆಚ್ಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರೇ ಆದರೂ ಸೂಕ್ತ ಕಾನೂನು ಕ್ರಮವಾಗಬೇಕು. ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಡಳಿತದಲ್ಲಿ ಹಿಡಿತ ತಪ್ಪಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ಕುರ್ಚಿ ಕಚ್ಚಾಟ ನಡೆಯುತ್ತಿದೆ. ಇವರ ಅಧಿಕಾರದ ಗೊಂದಲ ಆಡಳಿತವನ್ನು ಹಳ್ಳ ಹಿಡಿಸಿದ್ದು, ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ದೂರಿದರು. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಖಜಾನೆ ಖಾಲಿಯಾಗಿದೆ. ಪಟ್ಟಣ ಪಂಚಾಯ್ತಿ, ನಗರ ಸಭೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ಇವರ ಯಾವ ಗ್ಯಾರಂಟಿಯೂ ಇವರ ಕೈಹಿಡಿಯಲಿಲ್ಲ ಎಂದು ವ್ಯಂಗ್ಯವಾಡಿದರು.
ಎರಡು ತಿಂಗಳ ಗ್ಯಾರಂಟಿ ಕೊಡಲಿಲ್ಲ ಇವರು. ಗೃಹಲಕ್ಷ್ಮಿ ಯೋಜನೆಯಡಿ ಎರಡು ತಿಂಗಳ ಬಾಕಿ ಕೊಟ್ಟಿಲ್ಲ. ಐದು ಸಾವಿರ ಕೋಟಿ ರೂ. ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ದ್ವೇಷ ಭಾಷಣ ಮಸೂದೆಯು ವಿರೋಧಿಗಳನ್ನು ಹತ್ತಿಕ್ಕಲು ಈ ಜಾರಿಗೆ ತರಲಾಗುತ್ತಿದೆ. ಇದು ಸರಿಯಲ್ಲ ಎಂದು ಇದೇ ವೇಳೆ ಅವರು ಕರ್ನಾಟಕ ದ್ವೇಷ ಭಾಷಣ ವಿಧೇಯಕ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದರು.
ಶಾಸಕ ಬೈರತಿ ಬಸವರಾಜು ಪ್ರಕರಣದಲ್ಲಿ ಸರ್ಕಾರ ಟಾರ್ಗೆಟ್ ರಾಜಕಾರಣ ಮಾಡುತ್ತಿದೆ. ಬೈರತಿ ಬಸವರಾಜು ಅವರ ಕಾನೂನು ಹೋರಾಟ ಮಾಡುತ್ತಿದ್ದಾರೆ. ತಪ್ಪು ಮಾಡಿದ್ದರೆ ಕಾನೂನಿಗೆ ಅವರು ತಲೆ ಬಾಗುತ್ತಾರೆ. ಆದರೆ ದುರದ್ದೇಶಪೂರ್ವಕಾಗಿ ಅವರನ್ನು ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಕೆ.ಗೋಪಾಲಯ್ಯ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಹರೀಶ್, ನೆಲನರೇಂದ್ರಬಾಬು, ಎಂ.ಡಿ.ಲಕ್ಷೀನಾರಾಯಣ, ಹೇಮಲತಾ ಗೋಪಾಲಯ್ಯ, ಜಯರಾಮಣ್ಣ, ಅವಿನ್ ಆರಾಧ್ಯ, ನಿಸರ್ಗ ಜಗದೀಶ್, ನಾಗರತ್ನ ಲೋಕೇಶ್, ಮಹದೇವಣ್ಣ ,ಬಿಡಿ ಶ್ರೀನಿವಾಸ್ ಇದ್ದರು.
