Friday, November 22, 2024
Homeರಾಜ್ಯಪೆನ್‌ಡ್ರೈವ್‌ ಪ್ರಕರಣದ ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಪೆನ್‌ಡ್ರೈವ್‌ ಪ್ರಕರಣದ ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು,ಮೇ8- ಹಾಸನದಲ್ಲಿ ಸಂತ್ರಸ್ತ ಮಹಿಳೆಯರ ಅಶ್ಲೀಲ ಚಿತ್ರಗಳುಳ್ಳ ವಿಡಿಯೋಗಳನ್ನು ಬಿತ್ತರಿಸಿರುವ ವ್ಯಕ್ತಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2022ರಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಎಸ್‌ಪಿಗಳಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿ ಜೆಡಿಎಸ್‌ ಮಹಿಳಾ ವಿಭಾಗ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಸಂತ್ರಸ್ತ ಮಹಿಳೆಯರಿಗೆ ಹಾಗೂ ಕುಟುಂಬದವರಿಗೆ ನ್ಯಾಯ ಒದಗಿಸಲು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ರಾಜಕೀಯ ಮುಖಂಡರು, ಕಾರ್ಯಕರ್ತರು, ಸಮಾಜಘಾತುಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಜೆಡಿಎಸ್‌ ಮಹಿಳಾ ವಿಭಾಗ ಒತ್ತಾಯಿಸಿದೆ.

ಜೆಡಿಎಸ್‌ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ರಶ್ಮಿ ರಾಮೇಗೌಡ ನೇತೃತ್ವದಲ್ಲಿ ದೂರು ನೀಡಲಾಗಿದ್ದು, ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ವಿಫಲವಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಮಹಿಳಾ ಆಯೋಗದ ಪತ್ರವನ್ನು ಆಧರಿಸಿ ಸರ್ಕಾರ ಹಾಸನ ವಿಡಿಯೋ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ರಚಿಸಿರುವುದನ್ನು ಸ್ವಾಗತಿಸುವುದಾಗಿ ತಿಳಿಸಲಾಗಿದೆ.

ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಪೆನ್‌ಡ್ರೈವ್‌ ಮುಖಾಂತರ ರಾಜ್ಯಾದ್ಯಂತ ಹಂಚಿರುವ ಷಡ್ಯಂತ್ರದಲ್ಲಿ ಉಪಮುಖ್ಯಮಂತ್ರಿಗಳ ಕೈವಾಡವಿದೆ ಎಂದು ವಕೀಲ ದೇವೇರಾಜೇಗೌಡ ಆರೋಪಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2020 ಸೆಕ್ಷನ್‌ 66-ಇ , 67 ಮತ್ತು 67ಎ ಹಾಗೂ ಕಾಯ್ದೆ 228(ಎ) ಐಪಿಎಸ್‌ ಪ್ರಕಾರ ಯಾವುದೇ ವ್ಯಕ್ತಿ ಎಲೆಕ್ಟ್ರಾನಿಕ್‌ ಸಂದೇಶಗಳನ್ನಾಗಿ ಅಥವಾ ಚಿತ್ರೀಕರಣವನ್ನಾಗಲಿ ಸಂಗ್ರಹಿಸಿಡುವುದು, ಬಿತ್ತರಿಸುವುದು, ಸಂತ್ರಸ್ತೆಯರ ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೆ ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.

ಹಾಸನದಾದ್ಯಂತ ಸಾಮಾಜಿಕ ಜಾಲತಾಣ ಮತ್ತು ಪೆನ್‌ಡ್ರೈವ್‌ ಮೂಲಕ ವ್ಯಾಪಕವಾಗಿ ಹರಡಿರುವ ಸಂತ್ರಸ್ತೆಯರ ಅಶ್ಲೀಲ ಚಿತ್ರಗಳನ್ನು ತಡೆಹಿಡಿದು, ಹಂಚಿಕೆ ಮಾಡಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಹಾಸನ ಜಿಲ್ಲಾ ಎಸ್‌ಪಿಗೆ ದೂರು ನೀಡಿದ್ದರೂ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದೆ.

ಸಂಪುಟದ ಪ್ರಭಾವಿ ಸಚಿವರ ವಿರುದ್ದವೇ ವಿಡಿಯೋ ವಿತರಣೆ ಆರೋಪ ಕೇಳಿಬಂದಿರುವುದರಿಂದ ಸಂತ್ರಸ್ತರಿಗೆ ನ್ಯಾಯ ದೊರಕಿಸುವುದು ಅಸಾಧ್ಯ. ವಿಡಿಯೋ ಹರಿದಾಡದ್ದರಿಂದ ಸಂತ್ರಸ್ತೆಯರು ಅಪಾರ ನೋವು, ಅವಮಾನ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಮಹಿಳೆಯರ ಗುರುತು ಬಹಿರಂಗವಾಗುವಂತೆ ಮಾಡಿರುವುದು ಅಕ್ಷಮ್ಯವಾಗಿದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

RELATED ARTICLES

Latest News