ಬೆಂಗಳೂರು,ಮೇ9- ರಾಜ್ಯದಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಜಾನುವಾರುಗಳಿಗೆ ಮೇವಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ರೆಸಾರ್ಟ್‌ನಲ್ಲಿ ಒಳ್ಳೆಯ ಗಾಳಿ, ಏಸಿ, ಜೂಸ್ ಕುಡಿಯುತ್ತಾ ಎಲ್ಲವನ್ನು ಅನುಭವಿಸುತ್ತಿದ್ದಾರೆ. ನೀವು ಮಾತ್ರ ಮಜಾ ಅನುಭವಿಸಬೇಕೆ? ಜನರಿಗೆ ಕೊಡುವುದು ಯಾವಾಗ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ .ಅಶೋಕ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಪ್ರಧಾನಿಗೆ ಪ್ರಶ್ನೆಗಳನ್ನು ಮಾಡಿದ್ದಾರೆ. ಅದಕ್ಕೆ ನಮ್ಮದೇನು ತಕರಾರು ಇಲ್ಲ. ಅದಕ್ಕೂ ಮೊದಲು ಜನರಿಗೆ ಬೇಕಾದ ಕನಿಷ್ಟ ಸೌಲಭ್ಯಗಳನ್ನು ಕೊಡಿ. ಎಲ್ಲವನ್ನೂ ನೀವೇ ಮಜಾ ಮಾಡುವುದಾದರೆ ನಿಮಗೆ ಮತ ಹಾಕಿ ಗೆಲ್ಲಿಸಿದ ಜನ ಏನು ಮಾಡಬೇಕೆಂದು ವಾಗ್ದಾಳಿ ನಡೆಸಿದರು.
ನೀವು ಮಿನರಲ್ ನೀರನ್ನಾದರೂ ಕುಡಿಯಿರಿ ಅಥವಾ ಇನ್ನೇನಾದರೂ ಕುಡಿದುಕೊಳ್ಳಿ. ಮೊದಲು ಜನರಿಗೆ ಶುದ್ದ ಕುಡಿಯುವ ನೀರನ್ನು ಕೊಡಿ. ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿ, ಆಂಬ್ಯುಲೆನ್‌್ಸ ಚಾಲಕರಿಗೆ ವೇತನ ನೀಡಿ, ರೆಸಾರ್ಟ್‌ನಲ್ಲಿ ಹಾಯಾಗಿ ಕುಳಿತರೆ ಆಡಳಿತ ಯಂತ್ರ ನಡೆಸುವವರು ಯಾರು ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ.
ಆಂಬ್ಯುಲೆನ್‌್ಸ ಸವಲತ್ತು ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ಅವರ ಕನಿಷ್ಟ ಬೇಡಿಕೆಗಳು ಏನೆಂದು ಸಂಬಂಧಪಟ್ಟ ಸಚಿವರೂ ಕೇಳುತ್ತಿಲ್ಲ. ಸಿಎಂ ಸೇರಿದಂತೆ ಎಲ್ಲರೂ ಮೋಜುಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ವಿಧಾನಸೌಧಕ್ಕೆ ಬೀಗ ಹಾಕಿಬಿಡಿ ಎಂದು ಕಿಡಿಕಾರಿದರು.
ತೆಂಗು ಬೆಳೆಗಾರರಿಗೆ ಪರಿಹಾರ ನೀಡಿಲ್ಲ. ಸರಿಯಾದ ಆಹಾರ ನೀಡುತ್ತಿಲ್ಲವೆಂದು ಎರಡು ಲಕ್ಷದಷ್ಟು ಮಕ್ಕಳು ಅಂಗನವಾಡಿಗೆ ಸೇರಲೇ ಇಲ್ಲ, ಸಿಇಟಿ ಪ್ರಶ್ನೆ ಪತ್ರಿಕೆ ಸಮಸ್ಯೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ, ಬೆಂಗಳೂರು ಗುತ್ತಿಗೆದಾರರು ಕೆಲಸ ಕಾರ್ಯ ನಿಲ್ಲಿಸಿದ್ದಾರೆ,ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ ಆದರೆ ನೀವು ರೆಸಾರ್ಟ್ ನಲ್ಲಿ ಆರಾಮವಾಗಿ ಇದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದರು.
20 ದಿನದ ಚುನಾವಣಾ ಪ್ರಚಾರಕ್ಕೆ ವಿಶ್ರಾಂತಿ ಮೊರೆ ಹೋಗಿದ್ದೀರಿ ಆದರೆ ಮೋದಿ 10 ವರ್ಷದಲ್ಲಿ ಒಂದೂ ರಜೆ ಹಾಕಿಲ್ಲ, ನೀವು ರೆಸಾರ್ಟ್‌ನಲ್ಲಿ ಕುಳಿತುಕೊಂಡು ಮೋಜು ಮಾಡುತ್ತಿದ್ದೀರಿ. ಅವರ ತಾಯಿ ತಾಯಿ ನಿಧನರಾದರೂ ಪ್ರಧಾನಿ ಮೋದಿ ಕರ್ತವ್ಯ ಬಿಡಲಿಲ್ಲ, ರಜೆ ಪಡೆಯಲಿಲ್ಲ, ಎಲ್ಲಿಯ ಮೋದಿ ಎಲ್ಲಿಯ ಸಿದ್ದರಾಮಯ್ಯ, ಸಿದ್ದರಾಮಯ್ಯ ಕಾಮ್ ಚೋರ್, ಮೋದಿಗೆ ಹೋಲಿಕೆ ಸಲ್ಲದು, ಮೋದ ಕಾಯಕಯೋಗಿ, ಸಿದ್ದರಾಮಯ್ಯ ಮಜಾವಾದಿ ಎಂದು ವಾಗ್ದಾಳಿ ನಡೆಸಿದರು.
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹಾಗಾರ ಸ್ಯಾಮ್ ಪಿತ್ರೋಡ ವಿರುದ್ಧವೂ ಕೆಂಡಕಾರಿದ ಅಶೋಕ್, ವರ್ಣನೀತಿ ಅನುಸರಿಸುತ್ತಿರುವ ಅವರ ವಿರುದ್ಧ ಪಕ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಇವರೆಲ್ಲ ಒಂದು ರೀತಿ ದೇಶದೊಳಗಿದ್ದೇ ದೇಶದ್ರೋಹಿ ಕೆಲಸ ಮಾಡುವವರು ಎಂದು ಟೀಕಾ ಪ್ರಹಾರ ನಡೆಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಬಣ್ಣದ ಕಾರಣ ರೈಲಿನಿಂದ ಕೆಳಗಿಳಿಸಿದ ನಿದರ್ಶನ ನಮ್ಮ ಮುಂದಿದೆ ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಜನಾಂಗೀಯ ನಿಂದನೆ ಎದುರಿಸಿದ್ದರು. ಅದರ ಪರಿಪಾಠವನ್ನು ಕಾಂಗ್ರೆಸ್ ಸ್ಯಾಮ್ ಪಿತ್ರೋಡ ಅವರ ಮೂಲಕ ಮಾಡುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿರುವ ಒಕ್ಕಲಿಗ, ಲಿಂಗಾಯತ, ದಲಿತರಿಗೆಲ್ಲ ಕಾಂಗ್ರೆಸ್ ಯಾವ ಬಣ್ಣ ಹಚ್ಚುತ್ತದೆ ? ಸೋನಿಯಾಗಾಂಧಿ ಇಟಲಿಯಿಂದ ಬಂದವರು, ಭಾರತೀಯರು ಎಂದು ಒಪ್ಪಿಕೊಳ್ಳಿ ಎಂದು ಬಲವಂತ ಮಾಡಿದರು. ಸೋನಿಯಾಗಾಂಧಿ ಯಾರು ? ಭಾರತೀಯರ ಹೌದಾ ಅಲ್ವಾ ಎಂದು ಕಾಂಗ್ರೆಸ್ ಹೇಳಬೇಕು, ರಾಬರ್ಟ್ ವಾದ್ರಾ ಯಾರು, ಯಾವ ದೇಶದಿಂದ ಬಂದವರು ಹೇಳಿ? ಎಂದು ಪ್ರಶ್ನಿಸಿದರು.