ಹಾಸನ, ಮೇ 9- ನಮ್ಮ ಜಿಲ್ಲೆಯಲ್ಲಿ ಲೈಂಗಿಕ ಹಗರಣ ಆಯಿತ್ತಲ್ಲಾ ಎಂಬುವುದು ಮನಸ್ಸಿಗೆ ಬಹಳ ವೇದನೆಯಾಗಿದೆ ಎಂದು ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಾರ್ವಭೌಮತ್ವ ಹೊಂದಿರುವ ಕುಟುಂಬದಿಂದ ಈ ರೀತಿಯ ಕೃತ್ಯ ನಡೆದಿರುವುದು ಬೇಸರ ತಂದಿದೆ. ಈ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಪೆನ್‌ಡ್ರೈವ್ ಪ್ರಕರಣ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಆರೋಪ ಹೊತ್ತಿರುವವರು ವಿದೇಶಕ್ಕೆ ಹೋಗಿದ್ದಾರೆ. ಇದೇ ಹಾಸನ ಜಿಲ್ಲೆಗೆ ಕಳಂಕ ತಂದಿದೆ ಎಂದರು.ಇಂತಹ ಕೃತ್ಯ ನಡೆಯಬಾರದಿತ್ತು. ಪಕ್ಷ ಭೇದ ಮರೆತು ಎಲ್ಲರೂ ಖಂಡಿಸಬೇಕಿತ್ತು. ಅದರಲ್ಲೂ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಅವರೇ ಚಿತ್ರೀಕರಿಸಿಕೊಂಡು ಪ್ರಪಂಚಕ್ಕೆ ಗೊತ್ತಾಗುವ ತರ ಮಾಡಿದ್ದಾರೆ.
ಅದನ್ನು ಸಹಿಸಲು ಸಾಧ್ಯವಿಲ್ಲ. ನಾಲ್ಕು ಗೋಡೆ ಮಧ್ಯೆ ಕೆಲವು ಘಟನೆಗಳು ನಡೆದುಹೋಗುತ್ತವೆ. ಆ ಘಟನೆ ಹೊರಗೆ ಬರಲು ಕಾರಣ ಏನು? ಅದನ್ನು ಸೆರೆ ಹಿಡಿಯದಿದ್ದರೆ ಹೊರ ಜಗತ್ತಿಗೆ ತಿಳಿಯುತ್ತಿರಲಿಲ್ಲ.
ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಹಾಸನ ಎನ್‌ಆರ್ ವೃತ್ತದಲ್ಲಿ ಪರದೆ ಹಾಕಿ ಎಲ್ಲರಿಗೂ ತೋರಿಸ್ತಿನಿ ಎಂದು ಶಾಸಕ ರೇವಣ್ಣ ಅವರಿಗೆ ಏಕವಚನದಲ್ಲೇ ಸವಾಲು ಹಾಕಿದ್ದರು ಎಂದು ಶಿವಲಿಂಗೇಗೌಡರು ತಿಳಿಸಿದ್ದರು.