Friday, November 22, 2024
Homeರಾಜ್ಯಪರಿಷತ್‌ ಚುನಾವಣೆ : 2 ಕ್ಷೇತ್ರಗಳಲ್ಲಿ ಜೆಡಿಎಸ್‌‍ ಸ್ಪರ್ಧೆ.. ?

ಪರಿಷತ್‌ ಚುನಾವಣೆ : 2 ಕ್ಷೇತ್ರಗಳಲ್ಲಿ ಜೆಡಿಎಸ್‌‍ ಸ್ಪರ್ಧೆ.. ?

ಬೆಂಗಳೂರು, ಮೇ 11- ಲೋಕಸಭಾ ಚುನಾವಣೆಯಂತೆ ವಿಧಾನ ಪರಿಷತ್ತಿನ ಆರು ಕ್ಷೇತ್ರಗಳ ಚುನಾವಣೆಯಲ್ಲೂ ಮೈತ್ರಿ ಮುಂದುವರೆಯಲಿದ್ದು, ಜೆಡಿಎಸ್‌‍ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ 25 ಹಾಗೂ ಜೆಡಿಎಸ್‌‍ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ವಿಧಾನ ಪರಿಷತ್ತಿನ ಮೂರು ಶಿಕ್ಷಕರ ಹಾಗೂ ಮೂರು ಪದವೀಧರರ ಕ್ಷೇತ್ರಗಳಿಗೆ ಜೂನ್‌ 3ರಂದು ಮತದಾನ ನಡೆಯಲಿದೆ.

ಇನ್ನೂ ಉಭಯ ಪಕ್ಷಗಳ ನಡುವೆ ಮೇಲನೆಯ ಚುನಾವಣೆಯ ಕ್ಷೇತ್ರಗಳ ಹಂಚಿಕೆ ಪ್ರಕ್ರಿಯೆ ಅಂತಿಮಗೊಂಡಿಲ್ಲ. ಜೆಡಿಎಸ್‌‍ ಎರಡು ಶಿಕ್ಷಕರ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಉಳಿದ ನಾಲ್ಕು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಲಿದೆ.

ಜೆಡಿಎಸ್‌‍ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದ ಮರಿತಿಬ್ಬೇಗೌಡ ಅವರು ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಜೆಡಿಎಸ್‌‍ ತೊರೆದು ಕಾಂಗ್ರೆಸ್‌‍ ಸೇರಿದ್ದಾರೆ. ಹೀಗಾಗಿ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌‍ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ.
ಈ ಕ್ಷೇತ್ರದಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ವಿವೇಕಾನಂದ ಎಂಬುವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಉದ್ದೇಶವಿದೆ ಎಂದು ಜೆಡಿಎಸ್‌‍ ಮೂಲಗಳು ತಿಳಿಸಿವೆ.

ವಿಧಾನ ಪರಿಷತ್‌ ಸದಸ್ಯರಾಗಿರುವ ಎಸ್‌‍.ಎಲ್‌ ಭೋಜೇಗೌಡ ಅವರು, ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಮರು ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ. ಬಿಜೆಪಿ ನಾಯಕರೊಂದಿಗೆ ಮೈತ್ರಿ ಮಾತುಕತೆ ಅಂತಿಮಗೊಂಡ ಬೆನ್ನಲ್ಲೇ ಜೆಡಿಎಸ್‌‍ ನಾಯಕರು ಸಭೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ.

ಬೆಂಗಳೂರು ಪದವೀಧರ ಕ್ಷೇತ್ರದಿಂದಲೂ ಜೆಡಿಎಸ್‌‍ನಿಂದ ಸ್ಪರ್ಧಿಸಲು ಹಲವು ಆಕಾಂಕ್ಷಿಗಳಿದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ಹಾಲಿ ವಿಧಾನ ಪರಿಷತ್‌ ಸದಸ್ಯರು ಇರುವುದರಿಂದ ಜೆಡಿಎಸ್‌‍ಗೆ ಈ ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆ ಇಲ್ಲವೆಂದೇ ಹೇಳಲಾಗುತ್ತಿದೆ.

RELATED ARTICLES

Latest News