ಮೈಸೂರು,ಮೇ11- ಸ್ವಂತ ಪರಿಶ್ರಮದ ಮೂಲಕ ರಾಜಕೀಯವಾಗಿ ಉನ್ನತಿ ಸಾಧಿಸಿದ ಪೀಳಿಗೆ, ಮುಂದಿನ ದಿನಗಳಲ್ಲಿ ಕಾಣಸಿಗುವುದು ಕಷ್ಟಸಾಧ್ಯ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ರಾಜಕೀಯ ಮುತ್ಸದ್ದಿ ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ದಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೆಲದಿಂದ ಎದ್ದು ಬಂದು ಸ್ವಂತ ಶಕ್ತಿ ಹಾಗೂ ಹೋರಾಟದ ಹಿನ್ನಲೆಯಿಂದ ಬೆಳೆದು ರಾಜಕಾರಣದಲ್ಲಿ ಪ್ರಭುತ್ವ ಸಾಧಿಸಿ ರಾಜ್ಯವನ್ನು ಆಳಿದ್ದಾರೆ ಮತ್ತು ಆಳುತ್ತಿದ್ದಾರೆ. ಸ್ವಂತ ಶಕ್ತಿಯಿಂದ ಬೆಳೆದು ಬಂದು ಅಧಿಕಾರ ಹಿಡಿದು ಜನರ ಬಗ್ಗೆ ಯೋಚಿಸಿ ಆಡಳಿತ ನಡೆಸಿದ ಪೀಳಿಗೆ ಬಹುಶಃ ಇದೇ ಕೊನೆ ಇರಬಹುದು ಎಂದರು.
ಪ್ರಸ್ತುತ ರಾಜಕಾರಣದಲ್ಲಿ ಒಂದಿಲ್ಲ ಒಂದು ಶಕ್ತಿಯಿಂದಲೇ ಅವಕಾಶ ಪಡೆದುಕೊಂಡ ಪೀಳಿಗೆಯೇ ಉಳಿದಿದೆ. ಹಿರಿಯ ನಾಯಕರು ನಮಗೆ ಮೇಲ್ಪಂಕ್ತಿ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ತಮಗಾದ ಅನ್ಯಾಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ಗ್ರಾಮಪಂಚಾಯ್ತಿ ಸದಸ್ಯರಿಂದ ಎಲ್ಲರು ನನ್ನನ್ನು ಟೀಕಿಸಿದ್ದಾರೆ.
ಆದರೆ ಶ್ರೀನಿವಾಸ್ ಪ್ರಸಾದ್ ಅವರು ಸಾರ್ವಜನಿಕವಾಗಿ ನನ್ನ ಬಗ್ಗೆ ಸಣ್ಣ ಟೀಕೆಯನ್ನೂ ಮಾಡಲಿಲ್ಲ. ಹದ್ದುಮೀರಿದ ಹೇಳಿಕೆಗಳನ್ನು ನೀಡಿದಾಗಲೂ ಕರೆದು ನಾಲ್ಕು ಗೋಡೆಗಳ ಮಧ್ಯೆ ನನಗೆ ಬುದ್ದಿ ಹೇಳಿದ್ದಾರೆ. ಅವರನ್ನು ಕಳೆದುಕೊಂಡಾಗ ತಂದೆ ಸಮಾನರಾದವರನ್ನು ಕಳೆದುಕೊಂಡ ನೋವು ಕಾಡಿತ್ತು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರತಾಪ್ ಸಿಂಹ ಹಾಡಿ ಹೊಗಳಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಎಚ್.ಸಿ.ಮಹದೇವಪ್ಪ , ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.