Tuesday, November 26, 2024
Homeರಾಜಕೀಯ | Politicsಪೆನ್‌ಡ್ರೈವ್‌ ಪ್ರಕರಣ ಮುಚ್ಚಿ ಹಾಕಲು ಸಿಬಿಐ ತನಿಖೆಗೆ ಒಪ್ಪಿಸಬೇಕೇ..? : ಪಾಟೀಲ್‌ ಪ್ರಶ್ನೆ

ಪೆನ್‌ಡ್ರೈವ್‌ ಪ್ರಕರಣ ಮುಚ್ಚಿ ಹಾಕಲು ಸಿಬಿಐ ತನಿಖೆಗೆ ಒಪ್ಪಿಸಬೇಕೇ..? : ಪಾಟೀಲ್‌ ಪ್ರಶ್ನೆ

ಬೆಂಗಳೂರು,ಮೇ 11-ಪೆನ್‌ಡ್ರೈವ್‌ ಪ್ರಕರಣದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಷಾ ನಿರ್ದೇಶನ ನೀಡಿದ್ದು ಎಂದು ಬಂಧಿತ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿಕೊಂಡಿರುವ ಆಡಿಯೋ ಸಾಕ್ಷ್ಯ ಲಭ್ಯವಿದೆ. ಹೀಗಿರುವಾಗ ಪ್ರಕರಣವನ್ನು ಮುಚ್ಚಿ ಹಾಕಲು ಸಿಬಿಐ ತನಿಖೆಗೆ ಒತ್ತಾಯಿಸಲಾಗುತ್ತಿದೆಯೇ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಪ್ರಶ್ನಿಸಿದ್ದಾರೆ.

ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದ ಪೆನ್‌ಡ್ರೈವ್‌ ಪ್ರಕರಣವನ್ನು ಈಗಾಗಲೇ ಎಸ್‌‍ಐಟಿ ತನಿಖೆಗೆ ವಹಿಸಲಾಗಿದೆ. ನಮ ರಾಜ್ಯದ ಅಧಿಕಾರಿಗಳು ಸಮರ್ಥರಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೂ ಕಾದುನೋಡಬೇಕಿದೆ ಎಂದರು.

ಸಿಬಿಐ ಎಂಬುದು ಬಿಜೆಪಿಯ ವಾಷಿಂಗ್‌ ಮಿಷಿನ್‌ ಇದ್ದಂತೆ. ಅಲ್ಲಿಗೆ ಹಾಕಿ ಆರೋಪಿಗಳನ್ನು ಸಿದ್ಧಗೊಳಿಸಿಕೊಳ್ಳುವುದು ಬಿಜೆಪಿಯ ಹುನ್ನಾರ. ಅದಕ್ಕಾಗಿಯೇ ಪೆನ್‌ಡ್ರೈವ್‌ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಕೇಳುತ್ತಿರಬಹುದು ಎಂದು ಹೇಳಿದರು. ಪ್ರಜ್ವಲ್‌ ರೇವಣ್ಣ ಖುದ್ದು ಶರಣಾಗುವುದು ಸೂಕ್ತ. ಈಗಾಗಲೇ ಲುಕೌಟ್‌ ನೋಟಿಸ್‌‍ ಜಾರಿಯಾಗಿದೆ. ಹೊರ ದೇಶದಲ್ಲಿ ಅಡಗಿರುವ ಅವರನ್ನು ಕರೆತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸರ್ಕಾರ ಪತನ ಅಸಾಧ್ಯ:
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್‌‍ ಸರ್ಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌‍ ನಾಯಕ ಕುಮಾರಸ್ವಾಮಿ ಅವರ ಅಭಿಪ್ರಾಯ ರಾಜಕೀಯ ಪ್ರೇರಿತ ಹೇಳಿಕೆ. ಇದು ಅಸಾಧ್ಯದ ಮಾತು ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ 3ನೇ 2ರಷ್ಟು ಶಾಸಕರನ್ನು ಬಿಜೆಪಿ ಸೆಳೆದುಕೊಂಡು ಮಹಾ ವಿಕಾಸ ಅಘಾಡಿ ಸರ್ಕಾರವನ್ನು ಪತನಗೊಳಿಸಿತ್ತು.

ಆದರೆ ಕರ್ನಾಟಕದಲ್ಲಿ ಆ ರೀತಿಯ ವಾತಾವರಣವಿಲ್ಲ. ಇಲ್ಲಿ ಕಾಂಗ್ರೆಸ್‌‍ ಸರ್ಕಾರವನ್ನು ತೆಗೆಯಬೇಕೆಂದರೆ 65 ಶಾಸಕರನ್ನು ಸೆಳೆಯಬೇಕು. ಬಿಜೆಪಿಯವರು 2ರಿಂದ 4 ಮಂದಿ ಕಾಂಗ್ರೆಸ್‌‍ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದರೆ ಬಿಜೆಪಿ, ಜೆಡಿಎಸ್‌‍ನಿಂದ ಬಹಳಷ್ಟು ಮಂದಿ ಕಾಂಗ್ರೆಸ್‌‍ನತ್ತ ವಲಸೆ ಬರುವ ಸಾಧ್ಯತೆ ಇದೆ.

ಬಿಜೆಪಿಯ ಹಲವು ಮಂದಿ ನಮ್ಮ ಸಂಪರ್ಕದಲ್ಲಿದ್ದಾರೆ, ಇನ್ನು ಜೆಡಿಎಸ್‌‍ ಮುಳುಗುವ ಹಡಗು. ಈ ಕಡೆಯಿಂದ ಶಾಸಕರು ಆ ಕಡೆಗೆ ವಲಸೆ ಹೋಗುವ ಸಾಧ್ಯತೆ ಕಡಿಮೆ ಇದೆ. ಆದರೆ ಆ ಕಡೆಯಿಂದ ಈ ಕಡೆಗೆ ಬರುವವರ ಸಂಖ್ಯೆ ಹೆಚ್ಚಿದೆ ಎಂದು ವಿವರಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್‌‍ ಮೈತ್ರಿ ಮಾಡಿಕೊಂಡಿದ್ದರಿಂದಾಗಿ ಆ ಪಕ್ಷದ ಬಹಳಷ್ಟು ಮಂದಿ ಅಸಮಾಧಾನಗೊಂಡಿದ್ದಾರೆ. ಜೆಡಿಎಸ್‌‍ನಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಹಲವು ನಾಯಕರು ನಾವು ಕರೆಯದೇ ಇದ್ದರೂ ನಮ್ಮ ಪಕ್ಷಕ್ಕೆ ಬರಲು, ನಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ತುದಿಗಾಲಲ್ಲಿ ನಿಂತಿದ್ದರು ಎಂದು ಪ್ರತಿಪಾದಿಸಿದರು.

ರಾಜ್ಯದ ಬರ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚಿನ ಪರಿಹಾರ ಪಡೆದುಕೊಳ್ಳಲು ರಾಜ್ಯ ಸರ್ಕಾರ ಕಾನೂನು ಹೋರಾಟವನ್ನು ಮುಂದುವರೆಸಲಿದೆ. ಎನ್‌ಡಿಎಆರ್‌ಎಫ್‌, ಎಸ್‌‍ಡಿಆರ್‌ಎಫ್‌ ನಿಯಮದಡಿ ಪರಿಹಾರದ ಮೊತ್ತ ಅತ್ಯಲ್ಪ. ಹೀಗಿರುವಾಗ ರಾಜ್ಯ ಸರ್ಕಾರ 18 ಸಾವಿರ ಕೋಟಿ ಕೇಳಿದರೆ, ಕೇಂದ್ರ ಸರ್ಕಾರ ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ಮೂರೂವರೆ ಸಾವಿರ ಕೋಟಿ ರೂ. ಮಾತ್ರ ಕೊಟ್ಟಿದೆ. ಅದನ್ನು ರೈತರ ಖಾತೆಗಳಿಗೆ ಜಮೆಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಪೂರ್ಣ ಪ್ರಮಾಣದ ಪರಿಹಾರ ಪಡೆದುಕೊಳ್ಳಲು ನ್ಯಾಯಾಂಗ ಹೋರಾಟ ಮುಂದುವರೆಯಲಿದೆ ಎಂದು ನುಡಿದರು.

RELATED ARTICLES

Latest News