ಹೈದರಾಬಾದ್,ಮೇ.12- ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ನಟ ಅಲ್ಲು ಅರ್ಜುನ್ ಮತ್ತು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‍ಸಿಪಿ) ಶಾಸಕ ರವಿಚಂದ್ರ ಕಿಶೋರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.
ರವಿಚಂದ್ರ ಅವರ ನಿವಾಸದಲ್ಲಿ ಯಾವುದೆ ಅನುಮತಿ ಪಡೆಯದೆ ಬೃಹತ್ ಸಾರ್ವಜನಿಕ ಸಭೆ ನಡೆಸಿದ ಆರೋಪದ ಮೇಲೆ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕ ರವಿಚಂದ್ರ ರೆಡ್ಡಿ ಅವರು ಈ ಸಭೆಗೆ ಅನುಮತಿ ಪಡೆಯದೇ ಅಲ್ಲು ಅರ್ಜುನ್ ಅವರನ್ನು ಆಹ್ವಾನಿಸಿದ್ದಾರೆ ಎಂದು ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ನಟ ಅಲ್ಲು ಅರ್ಜುನ್ ಮತ್ತು ರವಿಚಂದ್ರ ಕಿಶೋರ್ ರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಂಧ್ರಪ್ರದೇಶದ ನಂದ್ಯಾಲ ಕ್ಷೇತ್ರದ ಚುನಾವಣಾ ಉಸ್ತುವಾರಿಗಾಗಿ ನಿಯೋಜಿಸಲಾದ ನಂದ್ಯಾಲ ಗ್ರಾಮಾಂತರದ ಉಪ ತಹಸೀಲ್ದಾರ್ ಪಿ ರಾಮಚಂದ್ರರಾವ್ ಅವರು ಪ್ರಕರಣ ದಾಖಲಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ನಾಳೆ ನಡೆಯಲಿರುವ ಮತದಾನಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಜಾರಿಯಲ್ಲಿರುವ ಸೆಕ್ಷನ್ 144 ಅನ್ನು ಉಲ್ಲಂಸಿದ್ದಕ್ಕಾಗಿ FIR ದಾಖಲಿಸಲಾಗಿದೆ. ಅಲ್ಲು ಅರ್ಜುನ್ ಜೊತೆಗೆ, ಅವರ ಪತ್ನಿ ಸ್ನೇಹಾ ಕೂಡ ಬಂದಿದ್ದರು. ಸ್ಟಾರ್ ಹೀರೋ ತನ್ನ ಸ್ನೇಹಿತನಿಗಾಗಿ ಪ್ರಚಾರ ಮಾಡಿದ್ದು ನೋಡಿ ಅಭಿಮಾನಿಗಳು ಸೂಪರ್ ಥ್ರಿಲ್ ಆಗಿದ್ದಾರೆ.
ಅದರಲ್ಲೂ ತಮ್ಮ ಹತ್ತಿರದ ಸಂಬಂಧಿಯಾಗಿರುವ ಪವನ್ ಕಲ್ಯಾಣ್ ನೇತೃತ್ವದ ಪಕ್ಷದ ವಿರುದ್ದ ಮತ ಪ್ರಚಾರ ನಡೆಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲು ಅರ್ಜುನ್ ಅವರು ನನ್ನೆ ಸ್ನೇಹಿತರಿಗೆ ಸಹಾಯ ಮಾಡಲು ನಂದ್ಯಾಲಕ್ಕೆ ಭೇಟಿ ನೀಡಿದ್ದೇನೆ ಮತ್ತು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನೊಬ್ಬನೇ ಇಲ್ಲಿಗೆ ಬಂದಿದ್ದೇನೆ. ನನ್ನ ಸ್ನೇಹಿತರಲ್ಲಿ ಅವರು ಯಾವುದೇ ಕ್ಷೇತ್ರದಲ್ಲಿದ್ದರೂ ಅವರಿಗೆ ನನ್ನ ಸಹಾಯ ಬೇಕಾದರೆ ನಾನು ಅವರಿಗೆ ಸಹಾಯ ಮಾಡುತ್ತೇನೆ. ಇದು ನಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಅರ್ಥವಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.