Friday, November 22, 2024
Homeರಾಜಕೀಯ | Politicsವಿಧಾನಪರಿಷತ್‌ ಚುನಾವಣಾ ಮೇಲೆ ಪೆನ್‌ಡ್ರೈವ್‌ ಪ್ರಕರಣ ಪರಿಣಾಮ ಬೀರಲ್ಲ : ಸಿಎಂ

ವಿಧಾನಪರಿಷತ್‌ ಚುನಾವಣಾ ಮೇಲೆ ಪೆನ್‌ಡ್ರೈವ್‌ ಪ್ರಕರಣ ಪರಿಣಾಮ ಬೀರಲ್ಲ : ಸಿಎಂ

ಮೈಸೂರು,ಮೇ 14- ಶಿಕ್ಷಕರು ಹಾಗೂ ಪದವೀಧರರ ವಲಯದಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ದ್ವೈ ವಾರ್ಷಿಕ ಚುನಾವಣೆಯ ಮೇಲೆ ಪೆನ್‌ಡ್ರೈವ್‌ ಪ್ರಕರಣ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರದ ಮತದಾರರು ಪ್ರಬುದ್ಧರಿದ್ದಾರೆ. ಯಾವುದು ಸರಿ, ಯಾವುದು ತಪ್ಪು ಎಂದು ಯೋಚಿಸುವ ಹಾಗೂ ಕೇಂದ್ರ ಸರ್ಕಾರದ 10 ವರ್ಷಗಳ ಆಡಳಿತ ಹಾಗೂ ನಮ ಸರ್ಕಾರದ ಸಾಧನೆಗಳ ಬಗ್ಗೆ ವಿಮರ್ಶೆ ಮಾಡುವ ವಿವೇಚನೆ ಹೊಂದಿದ್ದಾರೆ. ಹೀಗಾಗಿ ಪೆನ್‌ಡ್ರೈವ್‌ ಪ್ರಕರಣ ಪರಿಣಾಮ ಬೀರುವುದಿಲ್ಲ ಎಂದರು.

ಬೆಂಗಳೂರು ದಕ್ಷಿಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌‍ ಪರವಾದ ವಾತಾವರಣವಿದೆ. ನಮ ಪಕ್ಷ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಆರು ತಿಂಗಳಿಗೂ ಮೊದಲೇ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಹೀಗಾಗಿ ಒಂದು ಸುತ್ತಿನ ಮತದಾರರ ಭೇಟಿ ಪೂರ್ಣಗೊಂಡಿದೆ ಎಂದು ಹೇಳಿದರು.

ಜೆಡಿಎಸ್‌‍-ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದರಿಂದ ನಮಗೇನೂ ನಷ್ಟವಾಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ಅವರು ಮೈತ್ರಿ ಮಾಡಿಕೊಂಡಿದ್ದರು. ಆದರೆ ಮತದಾರರು ನಮ ಪರವಾದ ಒಲುವು ಹೊಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ ಬಳಿ ಭ್ರಷ್ಟಾಚಾರದ ವಿಚಾರಕ್ಕೆ ಸಂಬಂಧಪಟ್ಟಂತಹ ಪೆನ್‌ಡ್ರೈವ್‌ ಇದೆ. ಸರ್ಕಾರ ತನಿಖೆ ಮಾಡುವ ತಾಕತ್ತು ಪ್ರದರ್ಶಿಸಿದರೆ ಅದನ್ನ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರದು ಹಿಟ್‌ ಅಂಡ್‌ ರನ್‌ ಕೇಸು. ಎಚ್‌.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.

ನಮ ಸರ್ಕಾರ ಪತನಗೊಳ್ಳುತ್ತದೆ ಎಂದು ಒಂದು ವರ್ಷದಿಂದಲೂ ಹೇಳುತ್ತಲೇ ಬಂದಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಮೊದಲು ತಮ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ. ಅಲ್ಲಿನವರು ನಮ ಸರ್ಕಾರದ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್‌‍ನಲ್ಲಿ ಒಳ ಜಗಳ ಇಲ್ಲ. ವಿರೋಧಪಕ್ಷಗಳು ರಾಜಕೀಯಕ್ಕಾಗಿ ಏನು ಬೇಕಾದರೂ ಹೇಳಿಕೊಳ್ಳಲಿ. ಒಳಜಗಳ ಇದ್ದಿದ್ದರೆ ಲೋಕಸಭಾ ಚುನಾವಣೆಯನ್ನು ಅಷ್ಟು ಒಗ್ಗಟ್ಟಾಗಿ ಎದುರಿಸಲು ಸಾಧ್ಯವಿತ್ತೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದೇ ವೇಳೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮರಿತಿಬ್ಬೇಗೌಡ ಅವರು ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದರು.ಈ ವೇಳೆ ಸಚಿವರಾದ ಎಚ್‌.ಸಿ.ಮಹದೇವಪ್ಪ, ಚೆಲುವರಾಯಸ್ವಾಮಿ, ಮಧು ಬಂಗಾರಪ್ಪ, ಕೆ.ವೆಂಕಟೇಶ್‌ ಸೇರಿದಂತೆ ಶಾಸಕರು ಹಾಜರಿದ್ದರು.

RELATED ARTICLES

Latest News