ಬೆಂಗಳೂರು, ಮೇ 15- ಪೆನ್ಡ್ರೈವ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ತಡರಾತ್ರಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. ಜರ್ಮನಿಯ ಮ್ಯೂನಿಚ್ ನಗರದಿಂದ ಇಂದು ಅವರು ಪ್ರಯಾಣ ಬೆಳೆಸುವ ಸಾಧ್ಯತೆಯಿದ್ದು, ಮಧ್ಯರಾತ್ರಿ 1 ಗಂಟೆ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಪ್ರಜ್ವಲ್ ಅವರ ತಂದೆ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರು ನೇರವಾಗಿ ಬಂದು ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ ಎಂದು ತಿಳಿದುಬಂದಿದೆ.ಜರ್ಮನಿಯ ಮ್ಯೂನಿಚ್ ನಗರದಿಂದ ಬೆಂಗಳೂರಿಗೆ ಹೊರಡಲಿರುವ ಲುಫ್ತಾನ್ಸಾ ಏರ್ಲೈನ್್ಸಗೆ ಸೇರಿದ ವಿಮಾನದಲ್ಲಿ ಪ್ರಜ್ವಲ್ ಅವರು ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.
ಹರಿಯಾಣ ರಾಜ್ಯದ ಅಕಲ್ ಟ್ರಾವೆಲ್ಸ್ ನಿಂದ ಪ್ರಜ್ವಲ್ಗೆ ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ.ಬಿಸಿನೆಸ್ ಕ್ಲಾಸ್ನಲ್ಲಿ ಟಿಕೆಟ್ ಬುಕ್ ಆಗಿದೆ.ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯರಾತ್ರಿ 12.30ರ ಸುಮಾರಿಗೆ ಈ ವಿಮಾನ ಆಗಮಿಸಲಿದೆ ಎಂದು ಲುಫ್ತಾನ್ಸಾ ಏರ್ಲೈನ್ಸ್ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಈ ವಿಮಾನ ನಿಲುಗಡೆಯಾಗಲಿದೆ. ಪೆನ್ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಲೇ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದು ಸಧ್ಯ ಜರ್ಮನಿಯಲ್ಲಿದ್ದಾರೆ ಎಂದು ಹೇಳಲಾಗಿದೆ.ಕಳೆದ 17 ದಿನಗಳಿಂದಲೂ ಅವರು ಭಾರತಕ್ಕೆ ಆಗ ಬರುತ್ತಾರೆ, ಈಗ ಬರುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಬರುವ ಸಾಧ್ಯತೆಗಳಿವೆ.
ಮೇ 1, ಮೇ 3, ಮೇ 5ರಂದು ಪ್ರಜ್ವಲ್ ರೇವಣ್ಣ ಅವರು ಭಾರತಕ್ಕೆ ಹಿಂದಿರುಗಲು ಟಿಕೆಟ್ ಬುಕ್ ಮಾಡಿ ಕೊನೆ ಕ್ಷಣದಲ್ಲಿ ರದ್ದು ಮಾಡಿದ್ದರು ಎಂದು ತಿಳಿದು ಬಂದಿದೆ.ಜರ್ಮನಿಯಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಪತ್ತೆಗಾಗಿ ಎಸ್ಐಟಿ ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದೆ.ಪ್ರಜ್ವಲ್ ರೇವಣ್ಣ ಅವರು ವಾಸಿಸುತ್ತಿರುವ ಪ್ರದೇಶ ಕುರಿತು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ವಿದೇಶಿ ಅಧಿಕಾರಿಗಳು ಎಸ್ಐಟಿ ಅಧಿಕಾರಿಗಳಿಗೆ ತಮ ವ್ಯಾಪ್ತಿಯಲ್ಲಿ ಕೊಡಬಹುದಾದ ಕೆಲವು ಮಾಹಿತಿಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.