Saturday, November 23, 2024
Homeರಾಜಕೀಯ | Politicsವರ್ಗಾವಣೆ ದಂಧೆ, ಪ್ರತಿ ಹುದ್ದೆಗೂ ರೇಟ್ ಫಿಕ್ಸ್, ಕರ್ನಾಟಕದಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರ: ಬಿಜೆಪಿ ವಾಗ್ದಾಳಿ

ವರ್ಗಾವಣೆ ದಂಧೆ, ಪ್ರತಿ ಹುದ್ದೆಗೂ ರೇಟ್ ಫಿಕ್ಸ್, ಕರ್ನಾಟಕದಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರ: ಬಿಜೆಪಿ ವಾಗ್ದಾಳಿ

ಬೆಂಗಳೂರು,ಮೇ 16- ಇಲಾಖೆಯಲ್ಲಿನ ವರ್ಗಾವಣೆಗೆ ಪ್ರತಿಯೊಂದು ಹುದ್ದೆಗೂ ದರ ನಿಗದಿಪಡಿಸಲಾಗಿದ್ದು, ಕರ್ನಾಟಕದಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಶಾಸಕ ಪಿ.ರಾಜೀವ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇಲಾಖೆಯಲ್ಲಿನ ಆಯಕಟ್ಟಿನ ಹುದ್ದೆಗಳಿಗೆ ಇಂತಿಷ್ಟು ಹಣ ನೀಡಿದರೆ ಮಾತ್ರ ವರ್ಗಾವಣೆ ಮಾಡಲಾಗುತ್ತದೆ. ಪ್ರತಿ ಇಲಾಖೆಯಲ್ಲೂ ಒಂದೊಂದು ಹುದ್ದೆಗೆ ಇಂತಿಷ್ಟು ಎಂದು ದರ ನಿಗದಿಪಡಿಸಲಾಗಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಸಮಾಜಘಾತುಕ ಶಕ್ತಿಗಳು, ಮೂಲಭೂತವಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸಿರುವ ಸರ್ಕಾರ ಜನಸಾಮಾನ್ಯರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದರು.

ಒಂದು ವರ್ಷದಲ್ಲಿ ಕೊಲೆ, ಸುಲಿಗೆ, ಮತಾಂತರ ತುಷ್ಟೀಕರಣದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶೂನ್ಯ ಅಭಿವೃದ್ಧಿ ಮತ್ತು ಅಸಮರ್ಥ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್‌‍ನ ಸಾಧನೆ ಎಂದು ವ್ಯಂಗ್ಯವಾಡಿದರು.

ಆಡಳಿತ ನಡೆಸಲು ಸರ್ಕಾರ ವಿಫಲವಾಗಿದೆ. ಜನರು ಏಕಾದರೂ ಇಂತಹ ಪಕ್ಷವನ್ನು ಅಧಿಕಾರಕ್ಕೆ ತಂದೆವೋ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಶೇ. 60 ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಎರಡು ಕಗ್ಗೊಲೆಗಳಾಗಿವೆ. ನೇಹಾ ಹತ್ಯೆ ಬಳಿಕ ಇದೀಗ ಅಂಜಲಿ ಕೊಲೆಯಾಗಿದೆ. ಈ ಬಂಡ ಸರ್ಕಾರದಲ್ಲಿ ಜನಸಾಮಾನ್ಯರಿಗೆ ಸುರಕ್ಷತೆ ಇಲ್ಲವಾಗಿದೆ. ಕೊಲೆ, ಸುಲಿಗೆ ವಸೂಲಿ ನಿರಂತರವಾಗಿ ನಡೆಯುತ್ತಿವೆ. ಒಂದು ರೀತಿ ಬಂಡ ರೀತಿಯಲ್ಲಿ ಸರ್ಕಾರ ವರ್ತನೆ ಮಾಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ಯಾವಾಗ ಏನು ಆಗುತ್ತದೆ ಎಂದು ಜನರು ಭಯಭೀತರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಗೃಹ ಇಲಾಖೆ ನಿರ್ವಹಣೆ ಮಾಡುವಲ್ಲಿ ಸಚಿವ ಡಾ.ಜಿ.ಪರಮೇಶ್ವರ್‌ ವಿಫಲರಾಗಿದ್ದಾರೆ. ತಕ್ಷಣವೇ ನೈತಿಕ ಹೊಣೆ ಹೊತ್ತು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ತಾಕೀತು ಮಾಡಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣವನ್ನು ಉದ್ದೇಶಪೂರಕವಾಗಿಯೇ ಮುಚ್ಚಿ ಹಾಕಲು ಸರ್ಕಾರ ಸಂಚು ರೂಪಿಸಿದೆ. ಮೊದಲು ಎಫ್‌ಐಆರ್‌ ಆದಾಗಲೂ ಪ್ರಜ್ವಲ್‌ ರೇವಣ್ಣ ಅವರನ್ನು ಏಕೆ ಬಂಧಿಸಲಿಲ್ಲ. ನಿಮಗೆ ನಿಜವಾಗಿಯೂ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದಿದ್ದರೆ ನಿಸ್ಪಕ್ಷಪಾತ ತನಿಖೆ ನಡೆಸಬೇಕಿತ್ತು. ಎಸ್‌‍ಐಟಿ ರಚನೆಯಾಗುತ್ತಿದ್ದಂತೆ ಹೊರದೇಶಕ್ಕೆ ಹೋಗಬಹುದೆಂಬ ಸೂಕ್ಷ್ಮತೆ ಗುಪ್ತಚರ ಇಲಾಖೆಗೆ ಇರಲಿಲ್ಲವೇ? ಎಂದು ಪ್ರಶ್ನಿಸಿದರು.

ಪ್ರಜ್ವಲ್‌ ರೇವಣ್ಣ ಅವರನ್ನು ಹೊರದೇಶಕ್ಕೆ ಕಳುಹಿಸಿಕೊಡಲು ಸರ್ಕಾರವೇ ವ್ಯವಸ್ಥಿತವಾಗಿ ಯೋಜನೆ ರೂಪಿಸಿತ್ತು. ಈಗ ರಾಜಕೀಯವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯ ಮತದಾನ ಮುಗಿದ ಮೇಲೆ ಈ ಪ್ರಕರಣದ ಬಗ್ಗೆ ಯಾರಿಗೂ ಗಂಭೀರತೆ ಇಲ್ಲ ಎಂದು ಹೇಳಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ರಾಜು ಮಾತನಾಡಿ, ಸರ್ಕಾರಕ್ಕೆ ಜೀವ ಇದೆಯೇ? ಅಥವಾ ಸತ್ತು ಹೋಗಿದೆಯೇ? ಮಹಿಳೆಯರು, ದಲಿತರು, ಅಮಾಯಕರ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ರಾಜ್ಯಪಾಲರು ವಜಾ ಮಾಡಬೇಕೆಂದು ಆಗ್ರಹಿಸಿದರು.

ಜನರ ರಕ್ಷಣೆ, ಆಸ್ತಿಪಾಸ್ತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಶಾಂತಿಯ ಬೀಡಾಗಿದ್ದ ಕರ್ನಾಟಕ ಇಂದು ಕೊಲೆಗಡುಕರ ತಾಣವಾಗಿದೆ. ಪ್ರಮುಖ ಆರೋಪಿಗಳನ್ನು ಬಿಟ್ಟು ಅಮಾಯಕರ ಮೇಲೆ ದೂರು ದಾಖಲಿಸಲಾಗುತ್ತದೆ. ವಿದ್ಯಾರ್ಥಿನಿ ಅಂಜಲಿ ಕೊಲೆಗೂ ಮುನ್ನ ನಿನ್ನನ್ನು ನೇಹಾ ರೀತಿಯಲ್ಲಿ ಕೊಲೆ ಮಾಡುತ್ತೇನೆಂದು ಆರೋಪಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಅವಳಿಗೆ ಸಂಬಂಧಪಟ್ಟವರು ದೂರು ಕೊಟ್ಟಿದ್ದರೂ ಇದನ್ನು ಪೊಲೀಸರು ಮೂಢನಂಬಿಕೆ ಎಂದು ಹೇಳಿದ್ದಾರೆ. ಮೊದಲು ಈ ಅಧಿಕಾರಿಗಳನ್ನು ಸೇವೆಯಿಂದಲೇ ಶಾಶ್ವತವಾಗಿ ವಜಾಗೊಳಿಸಬೇಕೆಂದು ಒತ್ತಾಯ ಮಾಡಿದರು.

RELATED ARTICLES

Latest News