ಬೆಂಗಳೂರು,ಮೇ17- ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಇಂದು 2023-24ನೇ ಸಾಲಿನ ವಿಧಾನಸಭೆಯ ಮುಂದಿಡಲಾಗುವ ಕಾಗದ ಪತ್ರಗಳ ಸಮಿತಿ ಸಭೆ ವಿಧಾನಸೌಧದಲ್ಲಿ ಇಂದು ಜರುಗಿತು.ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಸಭೆಯನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ನಡೆಸದಂತೆ ವಿಧಾನಸಭಾಧ್ಯಕ್ಷರು ನಿರ್ದೇಶನ ನೀಡಿದ್ದರು.
ರಾಜ್ಯದಲ್ಲಿ ಎರಡು ಹಂತದ ಲೋಕಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ವಿವಿಧ ಸ್ಥಾಯಿಸಮಿತಿಗಳ ಸಭೆ ನಡೆಸಲು ಸಭಾಧ್ಯಕ್ಷರು ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಇಂದು ರೇವಣ್ಣ ಅವರು ತಮ ಅಧ್ಯಕ್ಷತೆಯಲ್ಲಿರುವ ಕಾಗದಪತ್ರಗಳ ಸಮಿತಿ ಸಭೆಯನ್ನು ನಡೆಸಿದರು.
ನ್ಯಾಯಾಲಯದಿಂದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ನಂತರ ಪ್ರತಿದಿನ ಒಂದಲ್ಲ ಒಂದು ದೇವಾಲಯಕ್ಕೆ ಭೇಟಿ ನೀಡಿ, ಸಂಕಷ್ಟ ಪರಿಹಾರಕ್ಕಾಗಿ ವಿಶೇಷ ಪೂಜೆ ಸಲ್ಲಿಸುತ್ತಿರುವ ರೇವಣ್ಣ ಅವರು, ಇಂದು ಮಧ್ಯಾಹ್ನ ಎಂದಿನಂತೆ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರತಿಕ್ರಿಯೆ ನೀಡಲು ನಿರಾಕರಣೆ :
ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ವಿಧಾನಸೌಧದಲ್ಲಿ ನಡೆದ 2023-24ನೇ ಸಾಲಿನ ವಿಧಾನಸಭೆಯ ಮುಂದಿಡಲಾಗುವ ಕಾಗದಪತ್ರಗಳ ಸಮಿತಿ ಸಭೆಯ ನಂತರ ಸುದ್ದಿಗಾರರು ರೇವಣ್ಣ ಅವರ ಪ್ರತಿಕ್ರಿಯೆ ಕೇಳಲು ಮುಂದಾದಾಗ ಏನೂ ಮಾತನಾಡುವುದಿಲ್ಲ ಎಂದಷ್ಟೇ ಹೇಳಿದರು.
ವಿಷಯ ನ್ಯಾಯಾಲಯದಲ್ಲಿ ಇರುವಾಗ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಅವರು, ಕಾಗದಪತ್ರಗಳ ಸಮಿತಿಯ ಅಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.