Saturday, June 22, 2024
Homeರಾಜ್ಯಪ್ರಜ್ವಲ್‌ ರೇವಣ್ಣ ಪೆನ್‌‍ಡ್ರೈವ್‌ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಚಿಂತನೆ

ಪ್ರಜ್ವಲ್‌ ರೇವಣ್ಣ ಪೆನ್‌‍ಡ್ರೈವ್‌ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಚಿಂತನೆ

ಬೆಂಗಳೂರು,ಮೇ17- ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಭಾರೀ ಸದ್ದು ಮಾಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣವನ್ನು ಎಸ್‌‍ಐಟಿನಿಂದ ಸಿಬಿಐಗೆ ವರ್ಗಾಯಿಸಲು ಚಿಂತನೆ ನಡೆದಿದೆ.ಎಸ್‌‍ಐಟಿ ತನಿಖಾ ವ್ಯಾಪ್ತಿ ಸೀಮಿತವಾಗಿರುವುದರಿಂದ ಪ್ರಕರಣದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಹೆಸರು, ಕೇಳಿಬಂದಿರುವುದರಿಂದ ಸಿಬಿಐಗೆ ವಹಿಸುವಂತೆ ಎಸ್‌‍ಐಟಿಗೆ ನಿರ್ದೇಶನ ನೀಡಬೇಕೆಂದು ಖುದ್ದು ಸಂತ್ರಸ್ತೆಯರೇ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ.

ಅಶ್ಲೀಲ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸಂತ್ರಸ್ತ ಮಹಿಳೆಯರು ಎಸ್‌‍ಐಟಿನಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ನ್ಯಾಯಾಲಯಕ್ಕೆ ವಕೀಲರ ಮೂಲಕ ವಿಶೇಷ ಮೇಲನವಿ ಅರ್ಜಿಯನ್ನು ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಸದಕ್ಕೆ ಅವರು ಸ್ವದೇಶಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ವಿದೇಶದಲ್ಲಿರುವ ಯಾವುದೇ ಒಬ್ಬ ಆರೋಪಿಯನ್ನು ಕರೆತರಬೇಕಾದರೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯ. ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳಿಂದ ಸಾಧ್ಯವಿಲ್ಲದ ಕಾರಣ ಪ್ರಜ್ವಲ್‌ ರೇವಣ್ಣನನ್ನು ಕರೆತರುವುದು ಸಿಬಿಐನಿಂದ ಮಾತ್ರ ಸಾಧ್ಯ ಎಂಬುದು ಸಂತ್ರಸ್ತರ ಅಭಿಪ್ರಾಯ.

ಪಶ್ಚಿಮ ಬಂಗಾಳದ ಸಂದೇಶ್‌ ಕಾಳಿ ಪ್ರಕರಣವನ್ನು ಮೊದಲು ಅಲ್ಲಿನ ಟಿಎಂಸಿ ಸರ್ಕಾರ ಸಿಬಿಐಗೆ ವಹಿಸಲು ಹಿಂದೇಟು ಹಾಕಿತ್ತು. ಕೊನೆಗೆ ಸಂತ್ರಸ್ತೆಯರು ಹೈಕೋರ್ಟ್‌ಗೆ ಮೇಲನವಿ ಅರ್ಜಿ ಸಲ್ಲಿಸಿ ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿದ್ದರು. ಅಂತಿಮವಾಗಿ ಕೋಲ್ಕತ್ತಾ ಹೈಕೋರ್ಟ್‌ ಸಿಬಿಐಗೆ ಆದೇಶಿಸಿತ್ತು. ಬಳಿಕ ಟಿಎಂಸಿ ಸರ್ಕಾರ ಇದನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್‌ನಲ್ಲಿ ಮೇಲನವಿ ಅರ್ಜಿ ಸಲ್ಲಿಸಿತ್ತು. ಕೊನೆಗೆ ಕೋಲ್ಕತ್ತಾ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಿತು.

ಇದೀಗ ಅಶ್ಲೀಲ ವಿಡಿಯೋದಲ್ಲಿ ಕೇಳಿಬಂದಿರುವ ಸಂತ್ರಸ್ತೆಯರು ಸಿಬಿಐ ತನಿಖೆಗೆ ಒತ್ತಾಯಿಸಿ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಎಸ್‌‍ಐಟಿ ನಿಷ್ಪಕ್ಷಪಾತ ತನಿಖೆ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರೂ ಅಂತಿಮವಾಗಿ ಸರ್ಕಾರದ ವ್ಯಾಪ್ತಿಯಲ್ಲೇ ಬರುವುದರಿಂದ ಕೆಲವು ಪ್ರಭಾವಿಗಳನ್ನು ಬಂಧಿಸಲು ಸಾಧ್ಯವಿಲ್ಲ ಎಂಬುದು ಸಂತ್ರಸ್ತರ ಅಳಲು.

ಅಲ್ಲದೆ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಹೆಸರು ಕೇಳಿಬಂದಿತ್ತು. ಸಾಲದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಕರಣದ ತಿಮಿಂಗಲವೇ ಸರ್ಕಾರದಲ್ಲಿದೆ. ಎಸ್‌‍ಐಟಿ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವೇ? ಅವರನ್ನೇ ಬಂಧಿಸಿದರೆ ಎಲ್ಲವೂ ಹೊರಬೀಳಲಿದೆ ಎಂದು ಒತ್ತಾಯಿಸಿದ್ದರು.

ಸಂಶಯದ ನಡೆ:
ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳ ಪೆನ್‌‍ಡ್ರೈವ್‌ ವೈರಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಹಾಸನದ ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾದ 33/2024 ಪ್ರಕರಣಕ್ಕೆ ಹೊಸ ಹೆಸರು ಸೇರಿಸಿ ಇಬ್ಬರನ್ನು ಬಂಧಿಸಲಾಗಿದೆ. 6 ಮತ್ತು 7ನೇ ಆರೋಪಿಗಳಾಗಿ ಚೇತನ್‌ ಹಾಗೂ ಲಿಖಿತ್‌ ಬಂಧನವಾಗಿದೆ.

6 ಮತ್ತು 7ನೇ ಆರೋಪಿ ಬಂಧನವಾದರೂ ಮೊದಲ ಐದು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ, ಕಾಂಗ್ರೆಸ್‌‍ ಕಾರ್ಯಕರ್ತರಾದ ನವೀನ್‌ ಗೌಡ, ಚೇತನ್‌ ಹಾಗೂ ಪುಟ್ಟಿ ಆಲಿಯಾಸ್‌‍ ಪುಟ್ಟರಾಜ್‌‍ರನ್ನು ಎಸ್‌‍ಐಟಿ ಅಧಿಕಾರಿಗಳು ಈವರೆಗೂ ಬಂಧಿಸಿಲ್ಲ. ಅಲ್ಲದೇ ಪೆನ್‌‍ಡ್ರೈವ್‌ ಹೊಂದಿದ್ದ ಮೂಲ ವ್ಯಕ್ತಿಯಾಗಿರುವ ಸಂಸದನ ಮಾಜಿ ಕಾರು ಚಾಲಕನನ್ನೂ ಕೂಡ ತನಿಖಾ ತಂಡ ವಶಕ್ಕೆ ಪಡೆಯದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಮಾಜಿ ಶಾಸಕ ಪ್ರೀತಂಗೌಡ ಆಪ್ತ ಶರತ್‌ ಕೂಡ ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಹಾಸನದ ಮೂರನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಕಾರ್ತಿಕ್‌‍, ಚೇತನ್‌‍, ನವೀನ್‌ ಗೌಡ ಹಾಗೂ ಪುಟ್ಟರಾಜ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ.

ಜಾಮೀನು ಅರ್ಜಿ ವಜಾಗೊಂಡರೂ ಇವರ ಬಂಧನ ಮಾತ್ರ ಆಗಿಲ್ಲ. ಈಗಾಗಲೇ ಎಸ್‌‍ಐಟಿ ಎಲ್ಲಾ ಆರೋಪಿಗಳ ಮನೆ ಶೋಧ ನಡೆಸಿದೆ. ಇಷ್ಟಾದರೂ ವೀಡಿಯೋ ವೈರಲ್‌ ಮಾಡಿದ ಆರೋಪಿಗಳನ್ನು ಎಸ್‌‍ಐಟಿ ಬಂಧಿಸಿದೇ ಅಚ್ಚರಿ ಮೂಡಿಸಿದೆ.
ಎಫ್‌‍ಐಆರ್‌ನಲ್ಲಿ ಹೆಸರಿದ್ದ ಐವರು ಆರೋಪಿಗಳ ಬಂಧನವಾಗದಿರುವ ಬಗ್ಗೆ ಜೆಡಿಎಸ್‌‍ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆಯೇ ಐವರು ಆರೋಪಿಗಳ ಬಂಧನಕ್ಕೆ ಜೆಡಿಎಸ್‌‍ ಆಗ್ರಹಿಸಿತ್ತು. ಪ್ರಕರಣದ ತನಿಖೆ ಚುರುಕುಗೊಂಡರೂ ಆರೋಪಿಗಳ ಬಂಧನವಾಗದಿರುವ ಬಗ್ಗೆ ಚರ್ಚೆ ಶುರುವಾಗಿದೆ.

RELATED ARTICLES

Latest News