ನವದೆಹಲಿ,ಮೇ18- ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ನಿವಾಸದ ಸಿಸಿಟಿವಿಯನ್ನು ಟ್ಯಾಂಪರಿಂಗ್ ಮಾಡುತ್ತಿದ್ದಾರೆ ಎಂದು ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಈಗ ಈ ವ್ಯಕ್ತಿಗಳು ಮನೆಯ ಸಿಸಿಟಿವಿಯನ್ನು ಟ್ಯಾಂಪರಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ ಎಂದು ದೂರಿದ್ದಾರೆ.
ಶುಕ್ರವಾರದವರೆಗೆ ಸ್ವಾತಿ ಮಲಿವಾಲ್ ಅವರ ಡಿಪಿಯಲ್ಲಿ ಬಂಧನಕ್ಕೆ ಒಳಗಾದ ಕೇಜ್ರಿವಾಲ್ ಅವರ ಚಿತ್ರವಿತ್ತು. ಆದರೆ ಸ್ವಾತಿ ಮಲಿವಾಲ್ ದೂರಿನ ಬೆನ್ನಲ್ಲೇ ವಿಧಿವಿಜ್ಞಾನ ತಜ್ಞರು, ಪೊಲೀಸರ ತಂಡ ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿತು.
ತನಿಖೆಯ ಭಾಗವಾಗಿ ವಿಡಿಯೋ ಸೆರೆಹಿಡಿದ ನಂತರ ಇಂದು ನಸುಕಿನ ಜಾವ 2:15ಕ್ಕೆ ತಂಡ ಮುಖ್ಯಮಂತ್ರಿಗಳ ನಿವಾಸದಿಂದ ಹೊರಟಿತು.ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಸಿಸಿಟಿವಿಯನ್ನು ತನಿಖೆಯ ದೃಷ್ಟಿಯಿಂದ ತಾಂತ್ರಿಕ ಸಾಕ್ಷಿಯಾಗಿ ಪರಿಗಣನೆ ಮಾಡಲು ಡಿವಿಆರ್ ಸಹಿತ ದತ್ತಾಂಶವನ್ನು ದೆಹಲಿ ಪೊಲೀಸರು ಸೀಲ್ ಮಾಡಿದ್ದಾರೆ.