ಬೆಂಗಳೂರು,ಮೇ.18- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ನಿರ್ಣಾಯಕ ಪಂದ್ಯ ಕೂತುಹಲ ಕೆರಳಿಸಿದೆ.ಈ ಪಂದ್ಯದಲ್ಲಿ ಗೆಲುವು ಸಾಧಿಸಲಿರುವ ತಂಡ ಪ್ಲೇ ಆಫ್ ಹಂತ ತಲುಪಲು ಸಹಕಾರಿಯಾಗಲಿರುವುದರಿಂದ ಎರಡು ತಂಡಗಳ ನಡುವೆ ರೋಚಕ ಹಣಾಹಣಿಗೆ ಸಾಕ್ಷಿಯಾಗಲು ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಎರಡು ಪ್ರಬಲ ತಂಡಗಳ ನಡುವಿನ ಹೋರಾಟವನ್ನು ಕಣ್ಣಾಲಿಗಳಲ್ಲಿ ತುಂಬಿಕೊಳ್ಳಲು ಕಾತುರರಾಗಿರುವ ಕ್ರಿಕೆಟ್ ಪ್ರೇಮಿಗಳು ಟಿಕೆಟ್‌ಗಾಗಿ ಕೇಳಿದಷ್ಟು ಹಣ ಕೊಡಲು ಸಿದ್ದರಾಗಿದ್ದಾರೆ. ಹೀಗಾಗಿ ಕಾಳಸಂತೆಯಲ್ಲಿ ಟಿಕೆಟ್‌ಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಐಪಿಎಲ್‌ನಲ್ಲಿ ಮಿಶ್ರ ಫಲಿತಾಂಶ ಪಡೆದುಕೊಂಡಿದೆ. ಇದುವರೆಗೆ 13 ಪಂದ್ಯಗಳನ್ನು ಆಡಿದ್ದು 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಪಂದ್ಯಾವಳಿಯಲ್ಲಿ ಸ್ವಲ್ಪ ಉತ್ತಮ ರನ್ ಗಳಿಸಿದೆ. 13 ಪಂದ್ಯಗಳನ್ನು ಆಡಿರುವ ಸಿಎಸ್‌ಕೆ 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅವರ ಕೊನೆಯ ಪಂದ್ಯವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಐದು ವಿಕೆಟ್‌ಗಳ ಜಯ ತಮ ಗೆಲುವಿನ ಆವೇಗವನ್ನು ಮುಂದುವರಿಸುವ ಮತ್ತು ಅಗ್ರ ನಾಲ್ಕರಲ್ಲಿ ತಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ.
ಇಂದು ಸಂಜೆ ನಡೆಯಲಿರುವ ಈ ಪ್ರಮುಖ ಪಂದ್ಯದಲ್ಲಿ ಎಲ್ಲರ ಕಣ್ಣು ವಿರಾಟ್ ಕೋಹ್ಲಿ ಅವರ ಮೇಲೆ ನೆಟ್ಟಿದೆ. ಈ ಬಾರಿಯ ಐಪಿಎಲ್‌ನಲ್ಲಿ ಸತತವಾಗಿ ಅತ್ಯುತ್ತಮ ಆಟ ಪ್ರದರ್ಶಿಸುತ್ತಿರುವ ಕೋಹ್ಲಿ ಅವರ ಆಟದ ಮೇಲೆ ಆರ್‌ಸಿಬಿ ತಂಡದ ಭವಿಷ್ಯ ನಿಂತಿದೆ. ಕೋಹ್ಲಿ 13 ಪಂದ್ಯಗಳಲ್ಲಿ 66.1 ಸರಾಸರಿಯಲ್ಲಿ 661 ರನ್ ಗಳಿಸಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರ ಜೊತೆಗೆ ನಾಯಕ ಫಾಫ್ ಡು ಪ್ಲಿಸಿಸ್, ರಜತ್ ಪಾಟಿದಾರ್, ಗ್ರೀನ್ ಸಾಥ್ ನೀಡಿದರೆ ಜಯ ಗ್ಯಾರಂಟಿ ಎನ್ನುವಂತಿದೆ.
ಇಂದಿನ ಪಂದ್ಯದಲ್ಲಿ ಆರ್‌ಸಿಬಿ ರನ್ ರೇಟ್ ಆಧಾರದಲ್ಲಿ ಜಯಿಸಿದರೆ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ. ಸಿಎಸ್‌ಕೆ ಗೆಲುವು ಸಾಧಿಸಿದರೆ ಅದು ಸಲೀಸಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಒಂದು ವೇಳೆ ಮಳೆ ಬಂದು ಪಂದ್ಯ ಟೈ ಆದರೆ ಅದು ಸಿಎಸ್‌ಕೆಗೆ ವರದಾನವಾಗಲಿದೆ.ಸಿಎಸ್‌ಕೆ ತಂಡವನ್ನು ಈಗಾಗಲೇ ಹಲವಾರು ಬಾರಿ ಗೆಲ್ಲಿಸಿದ ಖ್ಯಾತಿಗೆ ಒಳಗಾಗಿರುವ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಪಂದ್ಯ ಎಂದು ಬಿಂಬಿಸಲಾಗುತ್ತಿದೆ.
ಹೀಗಾಗಿ ತಮ ಕೊನೆಯ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿಕೊಡುವ ಮೂಲಕ ಅಂತಿಮ ವಿದಾಯ ಹೇಳುವ ಕಾತುರದಲ್ಲಿದ್ದಾರೆ ಧೋನಿ ಅವರು ಹೀಗಾಗಿ ಈ ಪಂದ್ಯವನ್ನು ಗುರು-ಶಿಷ್ಯರ ನಡುವಿನ ಕದನ ಎಂದೇ ಬಿಂಬಿಸಲಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಮಾತ್ರ ಮಳೆರಾಯನ ಕಾಟ ಬಾರದಿರಲಿ ಎಂದು ಆರ್‌ಸಿಬಿ ಅಭಿಮಾನಿಗಳು ಕಂಡ ಕಂಡ ದೇವರಿಗೆ ಕೈ ಮುಗಿಯುತ್ತಿದ್ದಾರಂತೆ.
ಹೈ ವೋಲ್ಟೇಜ್ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಕಾತುರ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್‌್ಸ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಪ್ಲೇ ಆಫ್‌ಗೆ ಹೋಗಲು ಉಭಯ ತಂಡಗಳಿಗೂ ಇದು ಪ್ರಮುಖ ಪಂದ್ಯ ಇದಾಗಿದೆ. ಆರ್‌ಸಿಬಿ ಪಂದ್ಯ ವೀಕ್ಷಿಸಲು ಪ್ರಮುಖವಾಗಿ ಇಡೀ ಭಾರತವೇ ಕಾತುರದಿಂದ ಕಾಯುತ್ತಿದೆ. ಇತ್ತ ಈ ಪಂದ್ಯ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ಅನೇಕ ವಾರಗಳ ಹಿಂದೆಯೇ ಟಿಕೆಟ್‌ಗಳು ಬುಕ್ ಆಗಿವೆ.
ಭಾರತ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಎಮ್.ಎಸ್ ಧೋನಿ ಅವರನ್ನು ಕ್ರೀಡಾಂಗಣದಲ್ಲಿ ಕಾಣುವುದೇ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ. ಇದಕ್ಕಾಗಿ ಎಷ್ಟೋ ದಿನಗಳ ಮುಂದೆಯೇ ಈ ಪಂದ್ಯದ ಟಿಕೆಟ್‌ಅನ್ನು ಖರೀದಿಸಿ, ಸೀಟು ಕಾಯ್ದಿರಿಸಿದ್ದಾರೆ.
ಈ ಸಲ ಕಪ್ ನಮ್ದೆ ಎನ್ನುವ ಆರ್‌ಸಿಬಿ ಅಭಿಮಾನಿಗಳ ಘೋಷವಾಕ್ಯ ಇಡೀ ಕ್ರೀಡಾಂಗಣ ತುಂಬಾ ಮೊಳಗಲು ಕ್ರೀಡಾಂಗಣ ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಭೀತಿ ಒಂದು ಕಡೆ ಕಾಡುತ್ತಿದೆ.ಚಿನ್ನಸ್ವಾಮಿ ಕ್ರೀಡಾಂಗಣಗದಲ್ಲಿ ಮಳೆ ಬಂದು ಪಂದ್ಯ ರದ್ದಾಗುವ ಸಾಧ್ಯತೆ ಅತಿ ಕಡಿಮೆ. ಏಕೆಂದರೆ ಮಳೆ ನಿಂತ ಕೆಲವೇ ಕ್ಷಣಗಳಲ್ಲಿ ಮೈದಾನವನ್ನು ಪಂದ್ಯಕ್ಕೆ ಸಿದ್ಧಪಡಿಸುವ ಅತ್ಯಾಧುನಿಕ ಸಬ್ ಏರ್ ಸಿಸ್ಟಮ್‌ಅನ್ನು ಚಿನ್ನಸ್ವಾಮಿ ಕ್ರೀಡಾಂಗಣ ಹೊಂದಿದೆ. ಈ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಿಕೊಂಡಿರುವ ವಿಶ್ವದ ಮೊದಲ ಕ್ರಿಕೆಟ್ ಮೈದಾನ ಇದಾಗಿದೆ.
2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್‌್ಸ ನಡುವಿನ ಪಂದ್ಯ ತೀವ್ರ ಮಳೆ ಬಂದು ನಿಂತ ಬಳಿಕವೂ ಯಾವುದೇ ಓವರ್‌ಗಳ ಕಡಿತವಿಲ್ಲದೆ ನಡೆದು ಫಲಿತಾಂಶ ಕಂಡಿತ್ತು. 2023ರ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಕ್ರೀಡಾಂಗಣಗಳ ಸಿದ್ಧತೆ ಪರಿಶೀಲನೆಗಾಗಿ ಆಗಮಿಸಿದ್ದ ಐಸಿಸಿಯ ತಜ್ಞರ ಸಮಿತಿ ಸಹ ಚಿನ್ನಸ್ವಾಮಿ ಕ್ರೀಡಾಂಗಣದ ಸಬ್ ಏರ್ ಸಿಸ್ಟಮ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತ್ತು.
ಏನಿದು ಸಬ್ ಏರ್ ಸಿಸ್ಟಮ್:
ಮಳೆಯ ಬಂದಾಗ ಎದುರಾಗುವ ಸವಾಲನ್ನು ತ್ವರಿತವಾಗಿ ನಿಭಾಯಿಸುವಲ್ಲಿ ಸಬ್ ಏರ್ ಸಿಸ್ಟಮ್ ಉಪಯುಕ್ತವಾಗಿದೆ. ಸಾಮಾನ್ಯವಾಗಿ ಯಾವುದೇ ಕ್ರೀಡಾಂಗಣದಲ್ಲಿ ಮಳೆಯಾದಾಗ ಪಿಚ್‌ಅನ್ನು ಕವರ್ ಮಾಡಲಾಗುತ್ತದೆ. ಜೊತೆಗೆ, ಅದರ ಹೊರಾಂಗಣವನ್ನು ಒಣಗಿಸಲು ರೋಲರ್, ಮತ್ತು ನೀರನ್ನು ಇಂಗಿಸುವ ಯಂತ್ರಗಳ ಮೊರೆಹೋಗಲಾಗುತ್ತದೆ. ಆದರೆ ಸಬ್ ಏರ್ ಸಿಸ್ಟಮ್ ನೀರಿನಿಂದ ತೊಯ್ದ ಹೊರಾಂಗಣವನ್ನು ಕೆಲವೇ ನಿಮಿಷಗಳಲ್ಲಿ ಒಣಗಿಸುತ್ತದೆ.
ಸಬ್ ಏರ್ ಸಿಸ್ಟಮ್‌ನಲ್ಲಿ ಮೈದಾನದ ಹೊರಾಂಗಣದ ಒಳಗೆ ಅಂದರೆ ಸುಮಾರು ಅರ್ಧದಿಂದ ಒಂದು ಅಡಿ ಅಳದಲ್ಲಿ ಪೈಪ್‌ಗಳನ್ನು ಅಳವಡಿಸಲಾಗಿರುತ್ತದೆ. ಆ ಪೈಪುಗಳಲ್ಲಿ ಸಂಗ್ರಹವಾಗುವ ನೀರನ್ನು ಹೀರಲು ಅತ್ಯಾಧುನಿಕ ಯಂತ್ರವನ್ನೂ ಕ್ರೀಡಾಂಗಣದಲ್ಲಿ ಅಳವಡಿಕೆ ಮಾಡಲಾಗಿದೆ. ಒಮೆ ಮಳೆ ಆರಂಭವಾದ ತಕ್ಷಣ ಸಬ್ ಏರ್ ಸಿಸ್ಟಮ್ ನೀರನ್ನು ಹೀರುವ ಕಾರ್ಯದಲ್ಲಿ ತೊಡಗುತ್ತದೆ. ಅಲ್ಲದೆ, ನೀರನ್ನು ಸಂಪೂರ್ಣವಾಗಿ ಹೀರಿದ ಬಳಿಕ ಅದೇ ಪೈಪ್‌ಗಳ ಮೂಲಕ ಬಿಸಿ ಗಾಳಿಯನ್ನು ಹೊರಸೂಸುತ್ತದೆ. ಇದರಿಂದಾಗಿ ಮೈದಾನದ ಹೊರಾಂಗಣದ ನೀರನ್ನು ತೆಗೆದು ಮೈದಾನವನ್ನು ಒಣಗಿಸಲು ನೆರವಾಗುತ್ತದೆ.
ಒಂದು ಸಬ್ ಏರ್ ಯಂತ್ರದ ಬೆಲೆ 3.5 ಕೋಟಿ ರೂ. ಇದ್ದು, ಈಗಾಗಲೇ 2017ರಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣ ಈ ವ್ಯವಸ್ಥೆ ಅಳವಡಿಸಿಕೊಂಡಿದೆ. ಯುಎಸ್‌ಎ ಮೂಲದ ಸಬ್ ಏರ್ ಕಂಪನಿಯ ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಗ್ರೇಟ್ ಸ್ಪೋರ್ಟ್‌್ಸ ಇನ್‌ಫ್ರಾ ಎನ್ನುವ ಸಂಸ್ಥೆ ಈ ವ್ಯವಸ್ಥೆ ಅಳವಡಿಸಿಕೊಟ್ಟಿದೆ.