ಬೆಂಗಳೂರು, ಮೇ 18- ಪೆನ್‌ಡ್ರೈವ್ ಪ್ರಕರಣ ಸದ್ದು ಮಾಡುತ್ತಿದ್ದಂತೆಯೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಆರ್ಥಿಕವಾಗಿ ಕಟ್ಟಿಹಾಕಲು ಎಸ್‌ಐಟಿ ಮುಂದಾಗಿದೆ ಎಂದು ತಿಳಿದುಬಂದಿದೆ.
ಪ್ರಜ್ವಲ್‌ಗೆ ಸೇರಿದ ಎಲ್ಲಾ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಎಸ್‌ಐಟಿ ಪಡೆದುಕೊಂಡಿದ್ದು, ಅವರ ಅಕೌಂಟ್‌ಗಳನ್ನು ಫ್ರೀಜ್ ಮಾಡಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.
ಪ್ರಜ್ವಲ್ ಖಾತೆಗೆ ಹಣ ಸಂದಾಯವಾಗಿರುವ ಬಗ್ಗೆ ಈಗಾಗಲೇ ಎಸ್‌ಐಟಿ ಮಾಹಿತಿಗಳನ್ನು ಕಲೆ ಹಾಕಿದ್ದು, ಒಟ್ಟು 7 ಬ್ಯಾಂಕ್ ಖಾತೆಗಳನ್ನು ಪ್ರಜ್ವಲ್ ಹೊಂದಿದ್ದು, ಅದರ ಸಂಪೂರ್ಣ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಪೆನ್‌ಡ್ರೈವ್ ವಿಚಾರ ಹೊರಬೀಳುತ್ತಿದ್ದಂತೆ ಪ್ರಜ್ವಲ್ ತಲೆಮರೆಸಿಕೊಂಡು 21 ದಿನಗಳಾದರೂ ಆತ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಆತನ ಆರ್ಥಿಕ ವಹಿವಾಟನ್ನು ಬಿಗಿಗೊಳಿಸಲು ಮುಂದಾಗಿದ್ದಾರೆ.
ಪ್ರಜ್ವಲ್ ಖಾತೆಗೆ ಹಣ ಹಾಕಿದವರ ಬಗ್ಗೆಯೂ ಎಸ್‌ಐಟಿ ಮಾಹಿತಿ ಕಲೆ ಹಾಕಿದ್ದು, ಏಳು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ಈ ಖಾತೆಗಳಿಗೆ ಎಲ್ಲಿಂದ, ಎಷ್ಟೆಷ್ಟು ಹಣ, ಯಾರು ಜಮಾ ಮಾಡಿದ್ದಾರೆ ಎಂಬ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.