ಲಖ್ನೋ,ಮೇ19- ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಕಪಿಲಾ ಘಾಟ್ ಬಳಿ ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ ಕನ್ನಡದ ಶಿಲಾ ಶಾಸನ ಪತ್ತೆಯಾಗಿದೆ.
ವಿಜಯನಗರದ ಸಾಮ್ರಾಜ್ಯಕ್ಕೆ ಸಾಮಂತರಾಗಿದ್ದ ಕೆಳದಿಯ ಅರಸರಿಂದ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕೆಳದಿ ಸಂಸ್ಥಾನ ಅಸ್ತಿತ್ವಕ್ಕೆ ಬಂದಿತ್ತು. 16ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾಗುತ್ತಿರುವ ಈ ಶಾಸನದಲ್ಲಿ ಕೆಳದಿ ಅರಸ ಶಿವಪ್ಪ ನಾಯಕರ ಹೆಸರು ಉಲ್ಲೇಖವಾಗಿದೆ.
ಸದ್ಯ ಕಪಿಲಾ ಘಾಟ್‌ನಲ್ಲಿ ಕಾಲು ಸಂಕವಾಗಿ, ಬಟ್ಟೆ ಒಗೆಯಲು ಕನ್ನಡ ಶಾಸನ ಬಳಕೆಯಾಗುತ್ತಿರುವುದು ಬೇಸರದ ಸಂಗತಿ. ಉತ್ತರಪ್ರದೇಶ ಸರ್ಕಾರವನ್ನು ಸಂಪರ್ಕಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಶಾಸನ ರಕ್ಷಣೆಗೆ ಮುಂದಾಗಬೇಕು. ಕೇಂದ್ರ ಪುರಾತತ್ವ ಇಲಾಖೆ ತಕ್ಷಣವೇ ಶಾಸನ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು. ಕನ್ನಡ ಹಾಗೂ ಪರ್ಶಿಯನ್ ಭಾಷೆಯಲ್ಲಿರುವ ಎರಡು ಶಾಸನವನ್ನು ರಕ್ಷಿಸಬೇಕೆಂಬುದು ಶಾಸನಪ್ರಿಯರ ಒತ್ತಾಯವಾಗಿದೆ.