Thursday, October 24, 2024
Homeರಾಷ್ಟ್ರೀಯ | Nationalಲೋಕಸಭೆ ಚುನಾವಣೆ : ನಾಳೆ 8 ರಾಜ್ಯಗಳ 49 ಕ್ಷೇತ್ರಗಳಲ್ಲಿ 5ನೇ ಹಂತದ ಮತದಾನ

ಲೋಕಸಭೆ ಚುನಾವಣೆ : ನಾಳೆ 8 ರಾಜ್ಯಗಳ 49 ಕ್ಷೇತ್ರಗಳಲ್ಲಿ 5ನೇ ಹಂತದ ಮತದಾನ

ನವದೆಹಲಿ, ಮೇ 19- ಮಹತ್ವದ 5ನೆ ಹಂತದ ಲೋಕಸಭೆ ಚುನಾವಣೆ ನಾಳೆ ನಡೆಯಲಿದ್ದು, ಭಾರಿ ಕುತೂಹಲ ಕೆರಳಿಸಿದೆ. ಘಟಾನುಘಟಿಗಳು ಸ್ಪರ್ಧಿಸಿರುವ ಹೈವೋಲ್ಟೇಜ್‌ ಕ್ಷೇತ್ರಗಳು ಇದರಲ್ಲಿ ಬರಲಿದ್ದು, ಈಗಾಗಲೇ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಐದನೆ ಹಂತದಲ್ಲಿ ಒಟ್ಟು ಎಂಟು ರಾಜ್ಯಗಳ 49 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7, ಬಿಹಾರ, ಒಡಿಶಾದ 5, ಜಾರ್ಖಂಡ್‌ನ 3 ಹಾಗೂ ಜಮ್ಮು ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಇದರಲ್ಲಿ ಒಟ್ಟು 695 ಅಭ್ಯರ್ಥಿಗಳು ಕಣದಲ್ಲಿದ್ದು, ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ರಾಹುಲ್‌ಗಾಂಧಿ, ಅಮೇಥಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಇರಾನಿ, ಲಖನೌನಿಂದ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಸ್ಪರ್ಧಿಸಲಿದ್ದು, ಪಶ್ಚಿಮ ಬಂಗಾಳದ ಅರಣ್ಯ ಪ್ರದೇಶ ವ್ಯಾಪ್ತಿಯ ಜಂಗಲ್‌ ಮಹಲ್‌ ಪ್ರದೇಶದ ಕ್ಷೇತ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಲಖನೌ, ಮೋಹನ್‌ಲಾಲ್‌ ಗಂಜ್‌, ರಾಯ್‌ಬರೇಲಿ, ಅಮೇಥಿ, ಜಲೌನ್‌, ಝಾನ್ಸಿ, ಹಮೀರ್‌ಪುರ್‌, ಬಂದಾ, ಫತೇಪುರ್‌, ಕೌಶಾಂಬಿ, ಬಾರಾಬಂಕಿ, ಫೈಜಾಬಾದ್‌, ಕೈಸರ್‌ಗಂಜ್‌ ಮತ್ತು ಗೋಂಡಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.

ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಾಲ್‌ ಕಿಶೋರ್‌ ಅವರು ಮೋಹನ್‌ಲಾಲ್‌ ಗಂಜ್‌ನಿಂದ ಸ್ಪರ್ಧಿಸುತ್ತಿದ್ದರೆ, ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ್‌ ಜ್ಯೋತಿ ಫತೇಪುರ್‌ ಕ್ಷೇತ್ರದಿಂದ ಮರು ಆಯ್ಕೆಗೆ ಕಣದಲ್ಲಿದ್ದಾರೆ.

ಇಲ್ಲಿ 2.68 ಕೋಟಿ ಮತದಾರರಿದ್ದು, ನಾಳೆ ಈ ಘಟಾನುಘಟಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಕಳೆದ ಬಾರಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳನ್ನು ಗೆದ್ದು ಬೀಗಿತ್ತು. ಅದೇ ಹುಮಸ್ಸಿನಲ್ಲಿ ಈಗ ಮುನ್ನುಗ್ಗುತ್ತಿದ್ದು, ಈಗ ದೋಸ್ತಿಗಳಾಗಿರುವ ಎಸ್‌‍ಪಿ ಅಖಿಲೇಶ್‌ ಯಾದವ್‌ ಮತ್ತು ಕಾಂಗ್ರೆಸ್‌‍ನ ರಾಹುಲ್‌ ಗಾಂಧಿ ಭಾರಿ ಸವಾಲೊಡ್ಡಿದ್ದಾರೆ.

ಇನ್ನು ಮಾಜಿ ಸಿಎಂ ಹಾಗೂ ಬಿಎಸ್‌‍ಪಿ ಪ್ರಭಾವಿ ನಾಯಕಿ ಮಾಯಾವತಿ ಕೂಡ ಕೆಲವು ಪ್ರದೇಶಗಳಲ್ಲಿ ಪ್ರಭಾವ ಹೊಂದಿದ್ದು, ಎಷ್ಟು ಸ್ಥಾನ ಗೆಲ್ಲುತ್ತಾರೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಇಂಡಿಯಾ ಒಕ್ಕೂಟ ಸೀಟು ಹಂಚಿಕೆ ಮಾಡಿಕೊಂಡಿದ್ದು, ಪ್ರಬಲ ಪೈಪೋಟಿ ನೀಡುತ್ತಿದೆ. ಪ್ರಮುಖವಾಗಿ ಈಗ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಅವರು ನಾಲ್ಕನೆ ಬಾರಿಗೆ ಲಖನೌ ಸೆಂಟ್ರಲ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇವರಿಗೆ ಹಾಲಿ ಶಾಸಕ ರವಿದಾಸ್‌‍ ಮೆಹೋತ್ರ ಸವಾಲೊಡ್ಡಿದ್ದಾರೆ.

ಕೈಸರ್‌ಗಂಜ್‌ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ, ಭಾರೀ ವಿವಾದ ಸೃಷ್ಟಿಯಾಗಿದ್ದ ಭಾರತದ ಕುಸ್ತಿ ಫೆಡರೇಷನ್‌ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ಶರಣ್‌ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿಲ್ಲ. ಆದರೆ, ಅವರ ಪುತ್ರ ಕರಣ್‌ಭೂಷಣ್‌ ಸಿಂಗ್‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.

ಬಿಜೆಪಿ ಹಿರಿಯ ನಾಯಕ ಕೀರ್ತಿವರ್ಧನ್‌ ಸಿಂಗ್‌ ಗೋಂಡಾ ಕ್ಷೇತ್ರದಲ್ಲಿ ಐದನೆ ಬಾರಿ ಕಣಕ್ಕಿಳಿದಿದ್ದು, ಎಸ್‌‍ಪಿಯ ಶ್ರೇಯಾವರ್ಮ ಅವರ ಪ್ರತಿಸ್ಪರ್ಧಿಯಾಗಿದ್ದಾರೆ.ಇನ್ನು ಕೌಶಾಂಬಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವಿನ ಹುಮಸ್ಸಿನಲ್ಲಿರುವ ವಿನೋದ್‌ಕುಮಾರ್‌ ಸೋಂಖರ್‌ ಅವರಿಗೆ ಎಸ್‌‍ಪಿಯ ಪುಷ್ಪೇಂದ್ರ ಸರೋಜ್‌ ಸವಾಲೊಡ್ಡಿದ್ದಾರೆ.

ಒಟ್ಟಾರೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ 14 ಕ್ಷೇತ್ರಗಳು ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದು, ಗೆಲುವಿಗಾಗಿ ನಡೆಸಿದ ಎಲ್ಲ ಕಾರ್ಯತಂತ್ರಗಳು ಮುಗಿದಿದ್ದು, ನಾಳೆ ಮತದಾನದಲ್ಲಿ ಯಾರ ಕಡೆ ಜನರು ಒಲವು ತೋರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಭಾರಿ ಹಿಂಸಾಚಾರ ಪೀಡಿತ ಪಶ್ಚಿಮ ಬಂಗಾಳದ ಬಂಗಾವ್‌, ಬರಾಕ್‌ಪುರ, ಹೌರಾ, ಉಲುಬೇರಿಯಾ, ಶ್ರೀರಾಮಪುರ್‌, ಪೋಗ್ಲೆ ಸೇರಿದಂತೆ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಇವು ಭಾರೀ ಸೂಕ್ಷ್ಮ ಪ್ರದೇಶಗಳಾಗಿದ್ದು, ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ.

ಮಹಾರಾಷ್ಟ್ರದ 13 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಮುಂಬೈ ಉತ್ತರ, ಮುಂಬೈ ದಕ್ಷಿಣ, ಮುಂಬೈ ಸೆಂಟ್ರಲ್‌, ಥಾಣೆ, ನಾಸಿಕ್‌, ಕಲ್ಯಾಣ್‌ ಕ್ಷೇತ್ರಗಳಿಗೆ ಬಿಜೆಪಿ ಹಾಗೂ ಶಿಂಧೆ , ಶಿವಸೇನೆ ಮತ್ತು ಎನ್‌ಸಿಪಿ ಜತೆಯಾಗಿ ಕಾಂಗ್ರೆಸ್‌‍ನ ಘಟಬಂಧನ್‌ಅನ್ನು ಎದುರಿಸುತ್ತಿದೆ. ಇಲ್ಲೂ ಕೂಡ ಭಾರೀ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ. ಇನ್ನು ಜಾರ್ಖಂಡ್‌ನ ಮೂರು ಕ್ಷೇತ್ರಗಳು ನಕ್ಸಲ್‌ ಬಾಧಿತ ಪ್ರದೇಶ ವ್ಯಾಪ್ತಿಗೆ ಬರುತ್ತಿದ್ದು, ಕಟ್ಟೆಚ್ಚರ ಘೋಷಿಸಲಾಗಿದೆ.

ಬಿಹಾರದಲ್ಲಿ ಐದು ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಇಲ್ಲಿ ಬಿಜೆಪಿ, ಜೆಡಿಯು ಮೈತ್ರಿಕೂಟ ಕಾಂಗ್ರೆಸ್‌‍ ಹಾಗೂ ಆರ್‌ಜೆಡಿಯನ್ನು ಎದುರಿಸುತ್ತಿದೆ. ಜಮು-ಕಾಶೀರದ ಬಾರಾಮುಲ್ಲಾದಲ್ಲೂ ಚುನಾವಣೆ ನಡೆಯುತ್ತಿದ್ದು, ಉಗ್ರರ ಚಟುವಟಿಕೆ ಹತ್ತಿಕ್ಕಲು ಈಗಾಗಲೇ ಸೇನಾಪಡೆಗಳು ಹದ್ದಿನ ಕಣ್ಣಿಟ್ಟಿವೆ.

ಮುಕ್ತ ಹಾಗೂ ನ್ಯಾಯಸಮತ ಚುನಾವಣೆಗೆ ಈಗಾಗಲೇ ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟಾರೆ ನಾಳೆ ನಡೆಯಲಿರುವ ಐದನೆ ಹಂತದ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

RELATED ARTICLES

Latest News