Friday, November 22, 2024
Homeರಾಜ್ಯಅರೆಸ್ಟ್ ವಾರಂಟ್‌ ಜಾರಿ : ಪ್ರಜ್ವಲ್‌ ರೇವಣ್ಣಗೆ ಮತ್ತಷ್ಟು ಸಂಕಷ್ಟ

ಅರೆಸ್ಟ್ ವಾರಂಟ್‌ ಜಾರಿ : ಪ್ರಜ್ವಲ್‌ ರೇವಣ್ಣಗೆ ಮತ್ತಷ್ಟು ಸಂಕಷ್ಟ

ಬೆಂಗಳೂರು, ಮೇ 19- ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನದ ವಾರಂಟ್‌ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ನಿನ್ನೆ ತನಿಖಾಧಿಕಾರಿಗಳು ತಲೆಮರೆಸಿಕೊಂಡಿರುವ ಪ್ರಜ್ವಲ್‌ ವಿರುದ್ಧ ಬಂಧನದ ವಾರಂಟ್‌ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯ ಬಂಧನದ ವಾರಂಟ್‌ ಅನ್ನು ಜಾರಿಗೊಳಿಸಿದ್ದು, ಪ್ರಜ್ವಲ್‌ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ.

ಈಗಾಗಲೇ ಪ್ರಜ್ವಲ್‌ ವಿಚಾರಣೆಗೆ ಹಾಜರಾಗುವಂತೆ ಎಸ್‌‍ಐಟಿ ನೋಟಿಸ್‌‍ಗಳನ್ನು ನೀಡಿತ್ತು. ನಂತರ ಲುಕ್‌ಔಟ್‌ ನೋಟಿಸ್‌‍ ಆಮೇಲೆ ಬ್ಲೂ ಕಾರ್ನರ್‌ ನೋಟಿಸ್‌‍ ಜಾರಿಗೊಳಿಸಲಾಗಿತ್ತು. ಆದರೂ ಪ್ರಜ್ವಲ್‌ ವಿದೇಶದಿಂದ ಹಿಂದಿರುಗಿ ವಿಚಾರಣೆಗೆ ಹಾಜರಾಗಿರಲಿಲ್ಲ. ಈಗ ಬರುತ್ತಾರೆ, ಆಗ ಬರುತ್ತಾರೆ ಎಂದು ವಿಮಾನದ ಟಿಕೆಟ್‌ ಬುಕ್‌ ಮಾಡಿ ಕೊನೆ ಕ್ಷಣದಲ್ಲಿ ರದ್ದು ಮಾಡಿ ಎಸ್‌‍ಐಟಿ ಅಧಿಕಾರಿಗಳ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರು.

ನಿನ್ನೆ ರೈಲಿನ ಮೂಲಕ ಜರ್ಮನಿಯಿಂದ ಲಂಡನ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಎಸ್‌‍ಐಟಿ ಪ್ರಜ್ವಲ್‌ ಬ್ಯಾಂಕ್‌ ಖಾತೆಗಳ ಮೇಲೆ ತೀವ್ರ ನಿಗಾವಹಿಸಿದೆ.ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅವರು ಸ್ವದೇಶಕ್ಕೆ ಮರಳಿದ ತಕ್ಷಣವೇ ಅವರ ಬಂಧನವಾಗಲಿದೆ.

ನ್ಯಾಯಾಲಯದ ಬಂಧನದ ವಾರಂಟ್‌ ಆಧರಿಸಿ ರಾಜತಾಂತ್ರಿಕ ಪಾಸ್‌‍ಪೋರ್ಟ್‌ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಎಸ್‌‍ಐಟಿ ಮುಂದಾಗಿದೆ ಎಂದು ತಿಳಿದು ಬಂದಿದೆ.ಈ ಹಿಂದೆ ಪ್ರಜ್ವಲ್‌ ಅವರನ್ನು ಭಾರತಕ್ಕೆ ಕರೆತರಲು ನೆರವು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕೇಂದ್ರಕ್ಕೆ ಪತ್ರ ಬರೆದಿದ್ದರು.

RELATED ARTICLES

Latest News