ಟೆಹ್ರಾನ್,ಮೇ20– ಭಾನುವಾರ ಪತನಗೊಂಡಿದ್ದ ಹೆಲಿಕಾಪ್ಟರ್‌ನಲ್ಲಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಹೊಸೈನ್ ಅಮಿರಾಬ್ದುಲ್ಲಾ ಹಿಯಾನ್ ಸಹಿತ ಎಲ್ಲರೂ ಮೃತಪಟ್ಟಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಅಪಘಾತದ ಸ್ಥಳದಲ್ಲಿ ಯಾರೂ ಜೀವಂತವಾಗಿರುವ ಯಾವುದೇ ಕುರುಹು ಕಂಡುಬಂದಿರಲಿಲ್ಲ. ಇದೀಗ ಇಬ್ರಾಹಿಂ ರೈಸಿ ಮೃತಪಟ್ಟಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಈ ದುರ್ಘಟನೆಯಲ್ಲಿ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಇಮಾಮ್ ಮೊಹಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್‌ಮ್ಯಾನ್‌ಗಳು ಮೃತಪಟ್ಟಿದ್ದಾರೆ.
ರೈಸಿ ನೆರೆಯ ರಾಷ್ಟ್ರವಾದ ಅಝರ್ಬೈಜಾನದಲ್ಲಿ ಆ ದೇಶದ ಅಧ್ಯಕ್ಷ ಇಲ್ಹಾಮ್ ಅಲಿಯಎವ್ ಅವರು ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿ ಇರಾನಿನ ನಗರ ತಬ್ರಿಜ್‌ಗೆ ಹಿಂದಿರುಗುವಾಗ ಈ ಘಟನೆ ಸಂಭವಿಸಿತ್ತು.
ರೈಸಿ ಅವರಿದ್ದ ಹೆಲಿಕಾಪ್ಟರ್‌ನೊಂದಿಗೆ ಪ್ರಯಾಣಿಸುತ್ತಿದ್ದ ಇತರೆ ಎರಡು ಬೆಂಗಾವಲು ಹೆಲಿಕಾಪ್ಟರ್‌ಗಳು ಸುರಕ್ಷಿತವಾಗಿ ಹಿಂದಿರುಗಿವೆ. ಬೆಂಗಾವಲು ಹೆಲಿಕಾಪ್ಟರ್‌ಗಳಲ್ಲಿ ಇಂಧನ ಸಚಿವ ಅಲಿ ಅಕ್ಬರ್ ಮೆಹ್ರಾಬಿಯಾನ್ ಹಾಗೂ ವಸತಿ ಸಚಿವ ಮೆಹ್ರದಾದ್ ಇದ್ದು ಅವರು ಸುರಕ್ಷಿತವಾಗಿ ಮರಳಿದ್ದಾರೆ.
ಇರಾನ್‌ನ ವಾಯುವ್ಯ ಪರ್ವತ ಪ್ರದೇಶದ ಜೋಲ್ಫಾದಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಸ್ಥಳವನ್ನು ಮಾನವರಹಿತ ವಿಮಾನ (ಯುಎವಿ) ಗುರುತಿಸಿದೆ ಎಂದು ಟರ್ಕಿಯ ಸರ್ಕಾರಿ ಸುದ್ದಿ ಸಂಸ್ಥೆ ಅನಾಡೊಲು ವರದಿ ಮಾಡಿದೆ.
ಪರ್ವತ ಪ್ರದೇಶದ ದುರ್ಗಮ ಸ್ಥಳಗಳು ಹಾಗೂ ಪ್ರತಿಕೂಲ ವಾತಾವರಣದ ನಡುವೆ ಗಂಟೆಗಟ್ಟಲೆ ಶೋಧ ಕಾರ್ಯ ನಡೆಸಿದ ಬಳಿಕ ರಕ್ಷಣಾ ತಂಡಗಳು ಪತನಗೊಂಡ ಹೆಲಿಕಾಪ್ಟರ್ ಅನ್ನು ಪತ್ತೆ ಮಾಡಿವೆ. ಅದು ಬಹುತೇಕ ಸಂಪೂರ್ಣ ಛಿದ್ರಗೊಂಡಿದೆ. ಅಧ್ಯಕ್ಷ ರೈಸಿ ಅವರ ಹೆಲಿಕಾಪ್ಟರ್ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ಜತೆಗಿನ ಇರಾನ್ ಸಂಘರ್ಷದ ನಡುವೆ ಈ ಅಪಘಾತ ಸಂಭವಿಸಿದೆ. ಹೀಗಾಗಿ ಘಟನೆಯಲ್ಲಿ ಇಸ್ರೇಲ್ ಪಾತ್ರ ಇರುವ ಆರೋಪಗಳು ಕೇಳಿಬಂದಿವೆ. ಆದರೆ ಇರಾನ್‌ನ ಬಹುತೇಕ ಮಾಧ್ಯಮಗಳು ಇದನ್ನು ಅಪಘಾತ ಎಂದೇ ತಿಳಿಸಿವೆ.
63 ವಯಸ್ಸಿನ ರೈಸಿ 2021ರಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧಿಕಾರ ವಹಿಸಿಕೊಂಡಾಗಿನಿಂದ ನೈತಿಕತೆಯ ಕಾನೂನುಗಳನ್ನು ಬಿಗಿಗೊಳಿಸುವಂತೆ ಆದೇಶಿಸಿದ್ದರು. ವಿಶ್ವ ಶಕ್ತಿಗಳೊಂದಿಗೆ ಪರಮಾಣು ಮಾತುಕತೆಗಳನ್ನು ತಳ್ಳಿಹಾಕಿದ್ದರು.
ಇಬ್ರಾಹಿಂ ರೈಸಿ ಮತ್ತು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ನೇತೃತ್ವದಲ್ಲಿ ಇರಾನ್ ಕಳೆದ ತಿಂಗಳು ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿತ್ತು. ಯುರೇನಿಯಂನ್ನು ಶಸ್ತ್ರಾಸ್ತ್ರ -ದರ್ಜೆಯ ಮಟ್ಟಕ್ಕೆ ಎಂದಿಗಿಂತಲೂ ಹತ್ತಿರದಲ್ಲಿ ಉತ್ಕೃಷ್ಟಗೊಳಿಸಿತ್ತು.
ಖಮೇನಿ ಮನವಿ:
ಜನರು ಶಾಂತಿಯಿಂದ ವರ್ತಿಸುವಂತೆ ಮನವಿ ಮಾಡಿರುವ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ, ದೇಶದ ಆಡಳಿತದಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ವಿಶ್ವದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.