ಬೆಂಗಳೂರು,ಮೇ21- ವಕೀಲ ದೇವರಾಜೇಗೌಡ ಅವರೊಂದಿಗೆ ಅರ್ಧ ನಿಮಿಷ ಮಾತನಾಡಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಒಪ್ಪಿಕೊಂಡ ಮೇಲೆ ಮುಖ್ಯಮಂತ್ರಿಗೆ ಬೇರೆ ಯಾವ ಸಾಕ್ಷಿ ಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಾಕ್ಷಿ ಕೇಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ದೇವರಾಜೇಗೌಡ, ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಅವರ ಸಂಭಾಷಣೆ ಸಾಕ್ಷಿಯಾಗುವುದಿಲ್ಲವೇ? ಅರ್ಧ ನಿಮಿಷ ಮಾತನಾಡಿರುವುದು ಪ್ರಮುಖ ಅಂಶವಲ್ಲವೇ? ಆದರೂ ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದಾರೆ ಎಂದರು.
ಎಸ್‌ಐಟಿಯವರು ಏಳು ಜನರನ್ನು ಬಂಧಿಸಿ ಕರೆತಂದಿದ್ದಾರೆ. ಯಾವ ಸಾಕ್ಷಿ ಆಧಾರದ ಮೇಲೆ ಬಂಧನ ಮಾಡಿ ಕರೆತಂದಿದ್ದಾರೆ. ಪ್ರತಿನಿತ್ಯ ಹಲವರನ್ನು ಕರೆದು ಕಿರುಕುಳ ನೀಡುತ್ತಿದ್ದಾರೆ. ಸ್ಪಷ್ಟವಾಗಿ ಕಣ್ಣಿಗೆ ಕಟ್ಟಿದ ಹಾಗೆ ಸಂಭಾಷಣೆ ಇದ್ದರೂ ಮಾಹಿತಿ ಕೊಡಿ ಎಂದು ಉಪಮುಖ್ಯಮಂತ್ರಿ ಕೇಳುತ್ತಾರೆ ಎಂದು ಹೇಳಿದರು.
ಬಹಳ ಕಷ್ಟಪಟ್ಟು ದೂರು ಕೊಡಿಸಿರುವುದಾಗಿ ಮಾತನಾಡುವಾಗ ಆ ಮಹಾನುಭಾವ ಹೇಳಿದ್ದಾರೆ. ಇದಕ್ಕಿಂತಲೂ ಇನ್ಯಾವ ಸಾಕ್ಷಿ ಬೇಕು ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಪ್ರಕರಣಕ್ಕೂ ಅವರಿಗೂ ಏನು ಸಂಬಂಧ? ಎಂದ ಅವರು, ಐದಾರು ಪ್ರಶ್ನೆಗಳನ್ನು ಕೇಳಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಸಂಸದ ಪ್ರಜ್ವಲ್ ಅವರ ಮೇಲೆ ಆರೋಪ ಕೇಳಿಬಂದ ಕೂಡಲೇ ಪಕ್ಷದಿಂದ ಅಮಾನತು ಮಾಡಿರುವುದು ನೈತಿಕತೆಯ ಆಧಾರದ ಮೇಲೆ. ಆದರೆ ಆರೋಪಿ ಸ್ಥಾನದಲ್ಲಿದ್ದರೂ ಅಪರಾಧಿಯನ್ನಾಗಿ ಮಾಡಿದ್ದಾರೆ. ಎಸ್‌ಐಟಿ ಅವರೇ ವಿಡಿಯೋದಲ್ಲಿ ಪುರುಷರ ಮುಖವಾಡವೇ ಇಲ್ಲ ಎಂದು ಹೇಳಿದ ಮೇಲೆ ಅಪರಾಧಿ ಸ್ಥಾನದಲ್ಲಿ ಯಾಕೆ ನಿಲ್ಲಿಸುತ್ತಾರೆ ಎಂದು ಪ್ರಶ್ನಿಸಿದರು.
ಇನ್ನು ಆರೋಪಿ ಸ್ಥಾನದಲ್ಲಿದ್ದು, ಅಪರಾಧಿ ಎಂದು ಸಾಬೀತಾಗಿಲ್ಲ. ನಿಮ್ಮ ರೀತಿ ನಾವು ಬಂಡತನ ತೋರಿಲ್ಲ. ಬಂಡತನದಲ್ಲಿ ನಿಮ್ಮ ಮಗನದ್ದು ನಡೆಯಿತಲಾ? ನಾನು ಈ ಹೆಸರು ಕೊಟ್ಟಿದ್ದೆ. ಆ ಹೆಸರು ಹೇಗೆ ಬಂತು ಎಂದು ಹೇಳಿದ್ದ ವಿಚಾರವನ್ನು ಸಿಎಸ್‌ಆರ್ ಹಣಕ್ಕಾಗಿ ಫೋನ್ ಮಾಡಿದ್ದು ಎಂದು ತಿರುಚಿದಿರಿ. ಮುಖ್ಯಮಂತ್ರಿಯಾಗಿ ಸಾಕ್ಷಿಗಳನ್ನು ಯಾವ ರೀತಿ ನಾಶ ಮಾಡುತ್ತೀರಿ ಎಂದು ಆರೋಪಿಸಿದರು.
ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ ಎಂದು ಆರೋಪಿಸಿದರು. ಮಾಜಿ ಸಚಿವ ರೇವಣ ಕುಟುಂಬದಲ್ಲಿ ಏಳೆಂಟು ವರ್ಷ ಕೆಲಸದಲ್ಲಿದ್ದವರು ಅವರಿಗೆ ತೊಂದರೆಯಾಗಿದ್ದರೆ ಏಕೆ ದೂರು ನೀಡಲಿಲ್ಲ ಎಂದು ಪ್ರಶ್ನಿಸಿದರು. ಅಯ್ಯೋ ಆ ವ್ಯಕ್ತಿಗಳನ್ನು ಇಷ್ಟಾದರೂ ಕರೆದುಕೊಂಡು ಬಂದು ದೂರು ಕೊಡಿಸಿದ್ದೇವೆ ಆ ಮಹಾನುಭಾವ ನಿಮ್ಮ ಡಿಸಿಎಂ ಹೇಳಿದ್ದಾರಲ್ಲಾ? ಇಂಥವರನ್ನು ಇಟ್ಟುಕೊಂಡು ರಾಜ್ಯ ಕಟ್ಟುತ್ತೀರಾ ಎಂದು ವಾಗ್ದಾಳಿ ನಡೆಸಿದರು.
ನಾವು ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇವೆ. ತಪ್ಪಿತಸ್ಥರನ್ನು ರಕ್ಷಣೆ ಮಾಡಲು ಹೋಗುವುದಿಲ್ಲ. ಜೆಡಿಎಸ್ ಸಂಬಂಧ ಯಾವಾಗ ಮುರಿಯುತ್ತೀರಿ ಎಂದು ಗೃಹಸಚಿವ ಅಮಿತ್ ಷಾ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕಾಗಿಯೇ ಈ ಪ್ರಕರಣವನ್ನು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಕಾಂಗ್ರೆಸ್ ಕನಸು ನುಚ್ಚು ನೂರಾಗಿದೆ. ಅದಕ್ಕಾಗಿ ಈ ಪ್ರಕರಣವನ್ನು ಹೊರತಂದು ರಾಜ್ಯವೇ ತಲೆತಗ್ಗಿಸುವಂತಹ ಕೆಲಸ ಮಾಡಲಾಗಿದೆ. ಪೆನ್‌ಡ್ರೈವ್ ಕೊಟ್ಟ ವ್ಯಕ್ತಿಯನ್ನು ಬಂಧಿಸಿದ್ದೀರಾ? ಇದರಲ್ಲೇ ಏನೋ ಹುನ್ನಾರ ಅಡಗಿದೆ. ಪ್ರಚಾರಕ್ಕಾಗಿ ಈ ಪ್ರಕರಣ ಬಳಸಿಕೊಳ್ಳಲಾಗುತ್ತಿದೆ ಹೊರತು ತನಿಖೆಯಿಂದ ನ್ಯಾಯ ಕೊಡಿಸುವ ಉದ್ದೇಶವಿಲ್ಲ ಎಂದರು. ಇಷ್ಟೆಲ್ಲಾ ಆದರೂ ಸರ್ಕಾರ ತಪ್ಪಿತಸ್ಥರಿಗೆ ರಕ್ಷಣೆ ಕೊಡುತ್ತಿದೆ. ಶಿವಕುಮಾರ್ ಅವರನ್ನು ಮುಂದುವರೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.