ಬೆಂಗಳೂರು, ಅ.14- ನೈರುತ್ಯ ಮುಂಗಾರು ಹಂಗಾಮು ಮುಗಿಯುತ್ತಾ ಬಂದರೂ ರಾಜ್ಯದಲ್ಲಿ ಮಳೆ ಕೊರತೆ ಮಾತ್ರ ನಿವಾರಣೆಯಾಗಿಲ್ಲ. ಆಗಸ್ಟ್, ಸೆಪ್ಟೆಂಬರ್ ನಂತೆಯೇ ಅಕ್ಟೋಬರ್‌ನಲ್ಲೂ ಮಳೆ ಕೊರತೆ ಮುಂದುವರೆದಿದೆ. ಈಶಾನ್ಯ ಹಿಂಗಾರಿನ ಆರಂಭವೂ ಆಶಾದಾಯಕವಾಗಿಲ್ಲ.
ಜೂನ್‍ನಲ್ಲಿ ಮುಂಗಾರು ದುರ್ಬಲಗೊಂಡಂತೆ ಹಿಂಗಾರಿನ ಆರಂಭವೂ ದುರ್ಬಲವಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಮುಂಗಾರು ಮಳೆ ಯ ಅವಧಿ ಮುಗಿಯುತ್ತಿದ್ದು, ಹಿಂಗಾರು ಮಳೆ ಆರಂಭವಾಗುವ ಪರ್ವ ಕಾಲದಲ್ಲಿ ಮಳೆಯಾಗುವುದು ವಾಡಿಕೆ. ಆದರೂ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ.
ಕಳೆದ ಎರಡು ವಾರಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು , ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದ್ದರೂ ವ್ಯಾಪಕ ಪ್ರಮಾಣದ ವಾಡಿಕೆ ಮಳೆಯಾಗಿಲ್ಲ. ಹೀಗಾಗಿ ರಾಜ್ಯದ ಬಹುತೇಕ ಭಾಗ ಬರದ ಕರಾಳ ಛಾಯೆಗೆ ಸಿಲುಕಿದೆ. ರಾಜ್ಯ ಸರ್ಕಾರವೂ 216 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಗ್ಯಾರಂಟಿ ಸರ್ಕಾರದ ಕುರಿತು ಹಿಗ್ಗಾಮುಗ್ಗಾ ಟ್ರೊಲ್
ಕಾವೇರಿ ಕೊಳ್ಳದ ಜಲಾಶಯಗಳಿಗೆ ಕಳೆದ ಎರಡು ವಾರದಲ್ಲಿ ಸ್ವಲ್ಪ ಪ್ರಮಾಣದ ಒಳ ಹರಿವು ಹೆಚ್ಚಾಗಿದೆ. ಆದರೆ, ನೀರಿನ ಬಿಕ್ಕಟ್ಟು ಪರಿಹಾರವಾಗುವಷ್ಟು ಮಳೆಯಾಗಿಲ್ಲ; ಜಲಾಶಯಗಳಿಗೆ ಒಳ ಹರಿವು ಸಹ ಹೆಚ್ಚಾಗಿಲ್ಲ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್ ಒಂದರಿಂದ ಸೆಪ್ಟೆಂಬರ್ 30ರವರೆಗೆ ರಾಜ್ಯದಲ್ಲಿ 642 ಮಿ.ಮೀ. ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 852 ಮಿ.ಮೀ. ಆಗಿದೆ. ಅಂದರೆ, ವಾಡಿಕೆಗಿಂತ ಶೇ.25ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ ಯಾವ ಭಾಗದಲ್ಲೂ ಈ ಅವಧಿಯಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ.
ಕಳೆದ ಒಂದು ವಾರದಲ್ಲೂ ರಾಜ್ಯದಲ್ಲಿ ವಾಡಿಕೆಗಿಂತ ಶೇ.42 ರಷ್ಟು ಕಡಿಮೆ ಮಳೆಯಾದ ವರದಿಯಾಗಿದೆ. ಅಕ್ಟೋಬರ್ ಒಂದರಿಂದ ನಿನ್ನೆ ವರೆಗಿನ ಮಳೆ ಪ್ರಮಾಣ ಗಮನಿಸಿದರೆ ವಾಡಿಕೆಗಿಂತ ಶೆ.54 ರಷ್ಟು ಕೊರತೆ ಇದೆ. ಅಂದರೆ ಕಳೆದ ಎರಡು ವಾರದಲ್ಲಿ ಮಳೆ ಕೊರತೆ ತೀವ್ರವಾಗಿದೆ. ಈ ಅವಧಿಯಲ್ಲಿ 71 ಮಿ.ಮೀ. ವಾಡಿಕೆ ಮಳೆಯಿದ್ದು, ಕೇವಲ 33 ಮಿ. ಮೀ.ನಷ್ಟು ಮಾತ್ರ ಮಳೆಯಾದ ವರದಿಯಾಗಿದೆ.
ಕಳೆದ ಜೂನ್‍ನಿಂದ ನಿನ್ನೆಯವರೆಗೆ ವಾಡಿಕೆ ಮಳೆ ಪ್ರಮಾಣ 923 ಮಿ.ಮೀ.ನಷ್ಟಿದ್ದು, 674 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ವಾಡಿಕೆಗಿಂತ ಶೇ. 27ರಷ್ಟು ಕೊರತೆಯಾಗಿದೆ. ಜನವರಿ ಒಂದರಿಂದ ನಿನ್ನೆಯವರೆಗೆ ವಾಡಿಕೆ ಮಳೆ ಪ್ರಮಾಣ 1042 ಮಿ.ಮೀ. ಇದ್ದು, 791 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.24 ರಷ್ಟು ಮಳೆಯಾಗಿದೆ.
ಪೂರ್ವ ಮುಂಗಾರಿನ ಅವಧಿಯ ಏಪ್ರಿಲ್ ಒಂದರಿಂದ ನಿನ್ನೆವರೆಗೆ ವಾಡಿಕೆಗಿಂತ ಶೇ.24ರಷ್ಟು ಮಳೆ ಕಡಿಮೆಯಾಗಿದೆ. 1029 ಮಿ.ಮೀ.ನಷ್ಟು ವಾಡಿಕೆ ಮಳೆ ಪ್ರಮಾಣವಿದ್ದು, ಕೇವಲ 781ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ, ಮೂವರು ದುರ್ಮರಣ
ಇದುವರೆಗಿನ ರಾಜ್ಯದ ಮಳೆಯ ವಾಸ್ತವ ಸ್ಥಿತಿ ಈ ರೀತಿ ಇದ್ದು, ಹಿಂಗಾರು ಮಳೆಯೂ ಮುಂಗಾರಿನಂತೆ ಕೈಕೊಟ್ಟರೆ, ಅಲ್ಪಸ್ವಲ್ಪ ಬೆಳೆಯೂ ರೈತರ ಕೈ ಸೇರುವುದು ಕಷ್ಟ. ಹೀಗಾಗಿ ರೈತರು ಹಿಂಗಾರು ಮಳೆಯಾಗುವುದನ್ನೇ ಎದುರು ನೋಡುತ್ತಿದ್ದಾರೆ.