Monday, November 25, 2024
Homeಜಿಲ್ಲಾ ಸುದ್ದಿಗಳು | District Newsಸಿಎಂ ತವರು ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು ಯುವಕ ಸಾವು

ಸಿಎಂ ತವರು ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು ಯುವಕ ಸಾವು

ಮೈಸೂರು, ಮೇ 21- ಕಲುಷಿತ ನೀರು ಸೇವಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿ.ಸಾಲುಂಡಿಯಲ್ಲಿ ನಡೆದಿದೆ.ಕನಕರಾಜ್‌ (20) ಮೃತಪಟ್ಟ ಯುವಕ. ಗ್ರಾಮಕ್ಕೆ ಸರಬರಾಜಾಗುತ್ತಿದ್ದ ನೀರನ್ನು ಸೇವಿಸಿದ ಕೆಲ ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕನಕರಾಜ್‌ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಉಳಿದವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಕ್ಕೆ ಸರಬರಾಜಾಗುತ್ತಿದ್ದ ನೀರಿಗೆ ಕಲುಷಿತ ನೀರು ಹೇಗೆ ಸೇರ್ಪಡೆಯಾಗಿದೆ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಜಿ.ಟಿ.ದೇವೇಗೌಡ ಸ್ಥಳಕ್ಕೆ ಭೇಟಿ ನೀಡಿ ಮೃತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.ಘಟನೆ ಕುರಿತು ವೈದ್ಯರಿಂದ ಮಾಹಿತಿ ಪಡೆದು ಕಲುಷಿತ ನೀರಿನ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿ ಶೀಘ್ರ ಶುದ್ಧ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಗ್ರಾಮಕ್ಕೆ ವೈದ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿ, ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.ಮೈಸೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ್ದು, ಕಲುಷಿತ ನೀರಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನುಮಾನಗಳಿವೆ, ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಂದು ಮಧ್ಯಾಹ್ನದೊಳಗೆ ವರದಿ ಬರಲಿದೆ ಎಂದು ವಿವರಿಸಿದ್ದಾರೆ.

ಸುಮಾರು 120 ಜನ ಆಸ್ಪತ್ರೆಗೆ ದಾಖಲಾಗಿದ್ದರು, 100 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಕೆಲವರನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಕನಕರಾಜು ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್‌್ಸ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಡಿಎಚ್‌ಒ ವಿವರಣೆ ನೀಡಿದ್ದಾರೆ.

ರಾಜ್ಯಮಟ್ಟದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಸಭೆ ನಡೆಸಿದೆ, ಆರೋಗ್ಯ ಇಲಾಖಾಧಿಕಾರಿಗಳ ಜೊತೆ ಕೂಡ ಚರ್ಚೆ ನಡೆದಿದೆ ಎಂದು ವಿವರಿಸಿದ್ದಾರೆ.ಈ ವೇಳೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವ ಮುಖ್ಯಮಂತ್ರಿಗಳು, ನೀರು ಕಲುಷಿತಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಆದೇಶಿಸಿದರು.

RELATED ARTICLES

Latest News