ಹಾಸನ, ಮೇ 22- ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ವಿದ್ಯಾವಂತರೇ ಜಾಲಕ್ಕೆ ಸಿಲುಕಿ ಮೋಸ ಹೋಗುತ್ತಿರುವುದು ವಿಪರ್ಯಾಸ.ನಾಗರಿಕರಿಗೆ ಅರಿವು ಮೂಡಿಸುವ ಡಿವೈಎಸ್ಪಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಸೈಬರ್ ಕಳ್ಳರು 15 ಲಕ್ಷಕ್ಕೂ ಅಧಿಕ ಹಣ ಎಗರಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಹಾಸನ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ಮುರಳೀಧರ್ ಅವರ ಖಾತೆಯಿಂದಲೇ 15,98,761 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡು ಸೈಬರ್ ಖದೀಮರು ವಂಚನೆ ಮಾಡಿದ್ದಾರೆ.ಮಡಿಕೇರಿಯ ಕೆನರಾ ಬ್ಯಾಂಕ್ ಮುಖ್ಯಶಾಖೆ ಹಾಗೂ ಭಾಗಮಂಡಲದ ಕೆನರಾಬ್ಯಾಂಕ್‌ನ ಶಾಖೆಯಲ್ಲಿ ಪಿ.ಕೆ.ಮುರಳೀಧರ್ ಖಾತೆಗಳನ್ನು ಹೊಂದಿದ್ದಾರೆ.
ಆಗಿದ್ದೇನು? :
ಕಳೆದ ಮೇ 20 ರಂದು ಮಧ್ಯಾಹ್ನ 1.30ರ ವೇಳೆಗೆ ಡಿವೈಎಸ್ಪಿ ಅವರ ಮೊಬೈಲ್ ಸಂಖ್ಯೆಗೆ ಖಾಲಿ ಮೆಸೇಜ್‌ಗಳು ಬಂದಿವೆ. ಇದಾದ ನಂತರ ತಮ ಗಮನಕ್ಕೇ ಬಾರದೇ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ.
ಮಡಿಕೇರಿಯಲ್ಲಿರುವ ಕೆನರಾ ಬ್ಯಾಂಕ್ ಮುಖ್ಯಶಾಖೆ ಖಾತೆಯಿಂದ ಬೆಳಗ್ಗೆ 10.29 ಗಂಟೆಯಿಂದ ಮಧ್ಯಾಹ್ನ 1.30 ಗಂಟೆವರೆಗೆ ಒಟ್ಟು 25 ವರ್ಗಾವಣೆಗಳ ಮೂಲಕ ಒಟ್ಟು 12,12,711 ರೂ. ಕೆನರಾಬ್ಯಾಂಕ್ ಭಾಗಮಂಡಲ ಶಾಖೆ ಖಾತೆಯಿಂದ ಬೆಳಿಗ್ಗೆ 10.28 ಗಂಟೆಯಿಂದ ಮಧ್ಯಾಹ್ನ 12.56 ಗಂಟೆವರೆಗೆ ಒಟ್ಟು 10 ವರ್ಗಾವಣೆ ಮೂಲಕ 3,88,050 ರೂ. ಹಣವನ್ನು ಎಗರಿಸಿದ್ದಾರೆ.
ಎರಡು ಕೆನರಾ ಬ್ಯಾಂಕ್ ಖಾತೆಗಳಿಂದ ಒಟ್ಟು 15,98,761 ರೂ. ಹಣವನ್ನು ಸೈಬರ್ ಕಳ್ಳರು ಎಗರಿಸಿದ್ದಾರೆ. ಸದ್ಯ ಖದೀಮರನ್ನು ಪತ್ತೆ ಮಾಡುವಂತೆ ಸೆನ್ ಪೊಲೀಸ್ ಠಾಣೆಗೆ ಡಿವೈಎಸ್ಪಿ ಬಿ.ಕೆ ಮುರುಳಿಧರ್ ದೂರು ನೀಡಿದ್ದಾರೆ.
ದಿನನಿತ್ಯ ದೇಶಾದ್ಯಂತ ಒಂದಿಲ್ಲಾ ಒಂದು ಘಟನೆಗಳು ನಡೆಯುತ್ತಲೇ ಇದ್ದು, ಹಲವಾರು ಮಂದಿ ಸೈಬರ್ ಕಳ್ಳರ ಜಾಲಕ್ಕೆ ಸಿಲುಕಿ ವಂಚನೆಗೊಳಗಾಗುತ್ತಿದ್ದಾರೆ. ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ಕ್ಷಣಮಾತ್ರದಲ್ಲಿ ಸೈಬರ್ ಕಳ್ಳರು ಎಗರಿಸುತ್ತಿದ್ದಾರೆ.
ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಹೊಸಹೊಸ ಮಾರ್ಗದಲ್ಲಿ ಜನರನ್ನು ಯಾಮಾರಿಸಿ ಹಣವನ್ನು ಲಪಟಾಯಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮೊಬೈಲ್‌ಗೆ ಬರುವ ಅಪರಿಚಿತ ಕರೆ, ಲಿಂಕ್‌ಗಳ ಮೇಲೆ ಅಪ್ಪಿತಪ್ಪಿಯೂ ಓಪನ್ ಮಾಡಬೇಡಿ. ಆದಷ್ಟು ಬ್ಯಾಂಕ್ ಖಾತೆಯಲ್ಲಿ ಹಣವನ್ನು ಕಡಿಮೆ ಇಟ್ಟುಕೊಳ್ಳಿ. ಬ್ಯಾಂಕುಗಳ ಎಫ್‌ಡಿ ಸೇರಿದಂತೆ ಇತರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದರೆ ಹಣವು ಸೇಫ್ ಆಗಿರಲಿದೆ.