Saturday, July 27, 2024
Homeರಾಜಕೀಯಭಾರೀ ಕುತೂಹಲ ಕೆರಳಿಸಿದೆ ಸಿಎಂ-ಡಿಸಿಎಂ ಆಯೋಜಿಸಿರುವ ಸಚಿವರ ಔತಣಕೂಟ

ಭಾರೀ ಕುತೂಹಲ ಕೆರಳಿಸಿದೆ ಸಿಎಂ-ಡಿಸಿಎಂ ಆಯೋಜಿಸಿರುವ ಸಚಿವರ ಔತಣಕೂಟ

ಬೆಂಗಳೂರು, ಮೇ 22- ಸಚಿವ ಸಂಪುಟದ ಎಲ್ಲಾ ಸಚಿವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಔತಣಕೂಟ ಆಯೋಜಿಸಿರುವುದು ಭಾರೀ ಕುತೂಹಲ ಕೆರಳಿಸಿದೆ.

ರಾಜ್ಯಸರ್ಕಾರ ಒಂದು ವರ್ಷ ಪೂರೈಸಿರುವುದು, ಲೋಕಸಭಾ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಜೊತೆಗೆ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಸಂಸದ ಡಿ.ಕೆ.ಸುರೇಶ್‌ ಅವರ ಮನೆಯಲ್ಲಿ ಇಂದು ಸಂಜೆ ಔತಣಕೂಟ ಆಯೋಜಿಸಲಾಗಿದೆ. ಸಂಪುಟದ ಎಲ್ಲಾ ಸಚಿವರಿಗೆ ಹಾಗೂ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ.

ರಾಜ್ಯಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, ಯಶಸ್ವಿ ಆಡಳಿತ ನಡೆಸಲಾಗಿದೆ. ಪಂಚಖಾತ್ರಿಗಳ ಜಾರಿ ಸೇರಿದಂತೆ ಹಲವು ಮೈಲಿಗಲ್ಲುಗಳನ್ನು ರಾಜ್ಯಸರ್ಕಾರ ದಾಟಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಸಚಿವರು ಉಸ್ತುವಾರಿ ವಹಿಸಿಕೊಂಡು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿದೆ.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಬ್ಬರೂ ಸಚಿವರಿಗೆ ಆಹ್ವಾನ ನೀಡಿದ್ದಾರೆ. ಔತಣಕೂಟದಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಯಲಿದೆ. ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಬಿಜೆಪಿ ಹಾಗೂ ಜೆಡಿಎಸ್‌‍ ನಾಯಕರು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡುವಲ್ಲಿ ಕಾಂಗ್ರೆಸ್‌‍ ವೈಫಲ್ಯಗಳು ಕಂಡುಬಂದಿವೆ. ಹೀಗಾಗಿ ಅಪಪ್ರಚಾರಗಳು ವೈಭವೀಕರಿಸಿದ್ದು, ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಲಿವೆ. ಯಾವ ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍ ಗೆಲ್ಲುವ ಸಾಧ್ಯತೆಯಿದೆಯೋ, ಹಿನ್ನಡೆಯಾಗುವ ಕ್ಷೇತ್ರಗಳಾವುವು, ಅದಕ್ಕೆ ಕಾರಣಗಳೇನು? ಎಂಬ ಬಗ್ಗೆಯೂ ಸಮಾಲೋಚನೆ ನಡೆಯಲಿದೆ ಎಂದು ತಿಳಿದುಬಂದಿದೆ.

ಮುಂದಿನ ದಿನಗಳಲ್ಲಿ ಇಲಾಖಾವಾರು ಸಾಧನೆಗಳ ಬಗ್ಗೆ ಕೂಡ ಚರ್ಚೆಯಾಗಲಿದೆ. ಕಳೆದ ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಪ್ರಕಟಿಸಲಾಗಿದೆ. ಆದರೆ ಅವುಗಳಿಗೆ ಈವರೆಗಿನ ಅಧಿಕೃತ ಆದೇಶ ಜಾರಿಯಾಗಿಲ್ಲ. ಅನುದಾನದ ಕೊರತೆ ಪ್ರಮುಖ ಕಾರಣವಾಗಿದ್ದರೆ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಮತ್ತೊಂದು ಕಾರಣವಾಗಿತ್ತು.

ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಸಚಿವರು ಆಯಾ ಇಲಾಖೆಗಳಿಗೆ ಸಂಬಂಧಪಟ್ಟ ಅಧಿಸೂಚನೆಗಳನ್ನು ಹಾಗೂ ಆಡಳಿತಗಳನ್ನು ಹೊರಡಿಸಬೇಕೆಂದು ಮುಖ್ಯಮಂತ್ರಿ ಸೂಚಿಸಲಿದ್ದಾರೆ.

ಚುನಾವಣಾ ನೀತಿ ಸಂಹಿತೆ ಇನ್ನೂ 15 ದಿನಗಳ ಕಾಲ ಚಾಲ್ತಿಯಲ್ಲಿರಲಿದೆ. ಆವರೆಗೂ ಆಡಳಿತವನ್ನು ನಿಷ್ಕ್ರಿಯವಾಗಿಡಲು ಸಾಧ್ಯವಿಲ್ಲ. ಹೀಗಾಗಿ ಸಚಿವರು ಕಾಲಕಾಲಕ್ಕೆ ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆಯ ಮಾಹಿತಿ ಪಡೆದುಕೊಳ್ಳಬೇಕು, ಸೂಚನೆಗಳನ್ನು ನೀಡಿ ಆಡಳಿತವನ್ನು ಜನಪರವಾಗಿ ಚುರುಕುಗೊಳಿಸಬೇಕೆಂದು ಸೂಚಿಸಲು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ.

ಸಂಜೆ ನಡೆಯುವ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ತಯಾರಿ ಬಗ್ಗೆ ಕೂಡ ಚರ್ಚೆಯಾಗಲಿದ್ದು, ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಕಾರ್ಯಕರ್ತರು ಸಜ್ಜುಗೊಳಿಸಲು ಚರ್ಚೆಯಾಗಲಿದೆ.
ಇದೇ ವೇಳೆ ಆರ್‌ಸಿಬಿ ಹಾಗೂ ಆರ್‌ಆರ್‌ ತಂಡಗಳ ಐಪಿಎಲ್‌ ಮ್ಯಾಚ್‌ಗಳು ಕೂಡ ಇದ್ದು, ಅದನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಮುಖ್ಯಮಂತ್ರಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ ಹೈಕಮಾಂಡ್‌ನ ನಿರ್ಧಾರಗಳಲ್ಲಿ ಕುತೂಹಲಗಳಿವೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಬದಲಾವಣೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

RELATED ARTICLES

Latest News