Saturday, November 23, 2024
Homeಜಿಲ್ಲಾ ಸುದ್ದಿಗಳು | District Newsಜಾತ್ರೆಯಲ್ಲಿ ಪ್ರಸಾದ ಸೇವಿಸಿದ್ದ 46 ಮಂದಿ ಅಸ್ವಸ್ಥ

ಜಾತ್ರೆಯಲ್ಲಿ ಪ್ರಸಾದ ಸೇವಿಸಿದ್ದ 46 ಮಂದಿ ಅಸ್ವಸ್ಥ

ಬೆಳಗಾವಿ, ಮೇ 22- ಜಾತ್ರೆ ವೇಳೆ ಪ್ರಸಾದ ಸೇವಿಸಿ ಐವರು ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಸವದತ್ತಿ ತಾಲ್ಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ ನಡೆದಿದೆ. ನಿನ್ನೆ ನಡೆದಿದ್ದ ಬೀರೇಶ್ವರ ಮತ್ತು ಕೆರೆಯಮ ದೇವಿ ಜಾತ್ರೆ ಮಹೋತ್ಸವದಲ್ಲಿ ಮಾವಿನ ಹಣ್ಣಿನ ಖಾದ್ಯ ಸೇರಿದಂತೆ ಸಿಹಿ ತಿಂಡಿಗಳನ್ನು ಮಾಡಲಾಗಿತ್ತು.

ಇದನ್ನು ನೂರಾರು ಮಂದಿ ಸೇವಿಸಿದ್ದರು. ಆದರೆ, ಕಳೆದ ರಾತ್ರಿ ಸುಮಾರು 46 ಮಂದಿ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದು, ಅದರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ವಸ್ಥಗೊಂಡವರನ್ನು ಕೂಡಲೇ ಸವದತ್ತಿ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಐವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಹುಲಿಕಟ್ಟೆ ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗ್ರಾಮಸ್ಥರ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಯಾವುದೇ ಅನಾಹುತ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್‌ ಕೋಣಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ಯಾರಿಗೂ ಪ್ರಾಣಾಪಾಯವಾಗಿಲ್ಲ. ನಿತ್ರಾಣಗೊಂಡು ಆಸ್ಪತ್ರೆಯಲ್ಲಿ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ಗಂಟೆಯೂ ಅವರ ಆರೋಗ್ಯ ತಪಾಸಣೆ ಮಾಡಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ತಿಳಿದು ಶಾಸಕ ವಿಶ್ವಾಸ ವೈದ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಯಾವುದೇ ರೀತಿಯಲ್ಲೂ ಔಷಧಿ ಕೊರತೆಯಾಗದಂತೆ ನೋಡಿಕೊಳ್ಳುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.

RELATED ARTICLES

Latest News