ಬೆಂಗಳೂರು, ಮೇ 23- ಮಲೆನಾಡು ಹಾಗೂ ಕೇರಳದ ವೈನಾಡು ಭಾಗದಲ್ಲಿ ಕಳೆದ ಕೆಲದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ರಾಜ್ಯದಲ್ಲಿನ ಕೆಲವು ಜಲಾಶಯಗಳ ಒಳಹರಿವು ಏರಿಕೆಯಾಗುತ್ತಿದೆ. ಮುಂಗಾರುಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿರುವುದರಿಂದ ಬತ್ತಿದ ನದಿ, ಹಳ್ಳಕೊಳ್ಳಗಳಲ್ಲಿ ನೀರು ಹರಿಯಲಾರಂಭಿಸಿದೆ. ನಿಂತು ಹೋಗಿದ್ದ ಒಳಹರಿವಿನ ಪ್ರಮಾಣ ಮತ್ತೆ ಆರಂಭವಾಗಿದ್ದು, ಹೊಸ ಆಶಾಭಾವನೆಯನ್ನು ಜನರಲ್ಲಿ ಮೂಡಿಸುವಂತಾಗಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿನ್ನೆಯ ಮಾಹಿತಿ ಪ್ರಕಾರ, ಲಿಂಗನಮಕ್ಕಿ ಜಲಾಶಯಕ್ಕೆ 1369 ಕ್ಯೂಸೆಕ್‌್ಸ ನೀರು ಹರಿದುಬರುತ್ತಿದೆ. ಜಲವಿದ್ಯುತ್ ಉತ್ಪಾದಿಸುವ ಮೂರು ಜಲಾಶಯಗಳಲ್ಲಿ ಒಟ್ಟು 1694 ಕ್ಯೂಸೆಕ್‌್ಸನಷ್ಟು ಒಳಹರಿವು ಕಂಡುಬಂದಿದೆ.
ಬೆಂಗಳೂರಿಗೆ ನೀರು ಪೂರೈಸುವ ಕಾವೇರಿ ಜಲಾನಯನ ಭಾಗದ ನಾಲ್ಕು ಜಲಾಶಯಗಳಲ್ಲಿ ಒಳಹರಿವು ಆರಂಭಗೊಂಡಿದೆ. ಒಟ್ಟಾರೆ 6 ಸಾವಿರ ಕ್ಯೂಸೆಕ್‌್ಸಗೂ ಹೆಚ್ಚಿನ ನೀರು ಜಲಾಶಯಗಳಿಗೆ ಬರುತ್ತಿದೆ. 6ನೇ ಜಲಾಶಯಕ್ಕೆ 400, ಹೇಮಾವತಿ ಜಲಾಶಯಕ್ಕೆ 2,800, ಕೆಆರ್‌ಎಸ್‌ಗೆ 1,400, ಕಬಿನಿ ಜಲಾಶಯಕ್ಕೆ 1,800 ಕ್ಯೂಸೆಕ್‌್ಸನಷ್ಟು ಒಳಹರಿವು ಬರುತ್ತಿದೆ.
ಇದೇ ರೀತಿ ಮಳೆ ಮುಂದುವರೆದರೆ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಜೂ.31 ಕ್ಕೆ ನೈರುತ್ಯ ಮುಂಗಾರು ಕೇರಳ ತಲುಪಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅದರಂತೆ ಮುಂಗಾರು ಸದ್ಯಕ್ಕೆ ಆರಂಭವಾದರೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳು ಇವೆ. ಹೀಗಾಗಿ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಒಳಹರಿವು ಬರಲು ಸಾಧ್ಯವಾಗುತ್ತದೆ. ನೀರಿನ ಬವಣೆಯೂ ನೀಗಲು ಸಹಕಾರವಾಗಲಿದೆ.