ಬೆಂಗಳೂರು,ಡಿ.28- ಬೆಂಗಳೂರಿನಲ್ಲಿ ಮಾದಕ ವಸ್ತುಗಳ ತಯಾರಿಕಾ ಘಟಕಗಳು ಪತ್ತೆಯಾಗಿರುವುದಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಸಿಡಿಮಿಡಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಇಂದು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಗೃಹಸಚಿವರು, ನಗರ ಪೊಲೀಸ್ ಆಯುಕ್ತರು, ಜಂಟಿ ಆಯುಕ್ತರು, ಉಪಆಯುಕ್ತರು ಮತ್ತು ಸಹಾಯಕ ಆಯುಕ್ತರ ಜೊತೆ ಹೊಸ ವರ್ಷಾಚರಣೆಗೆ ಪೂರ್ವಭಾವಿ ಭದ್ರತೆ ಕುರಿತು ಚರ್ಚೆ ನಡೆಸಿದರು.
ಈ ವೇಳೆ ಮಾದಕ ವಸ್ತುಗಳ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಮೈಸೂರಿನಲ್ಲಿ ಇದೇ ರೀತಿಯ ಸಿಂಥೆಟಿಕ್ ಡ್ರಗ್ಸ್ ಉತ್ಪಾದನೆಯ ಕಾರ್ಖಾನೆ ಪತ್ತೆಯಾಗಿತ್ತು. ಮುಂದೆ ಇಂತಹ ಘಟನೆಗಳು ಮರಕಳಿಸಬಾರದೆಂದು ಕಟ್ಟಪ್ಪಣೆ ಮಾಡಲಾಗಿತ್ತು.
ಹಾಗಿದ್ದರೂ ಮಾದಕ ವಸ್ತುಗಳ ತಯಾರಿಕಾ ಘಟಕಗಳು ಬೆಂಗಳೂರಿನಲ್ಲಿರುವು ದನ್ನು ಮಹಾರಾಷ್ಟ್ರದ ಪೊಲೀಸರ ಕಾರ್ಯಾಚರಣೆಯಿಂದ ಕಂಡುಬಂದಿರುವುದು ನಾಚಿಕೆಗೇಡು. ಇದರಿಂದ ರಾಜ್ಯ ಪೊಲೀಸರ ಕಾರ್ಯಕ್ಷಮತೆ ಪ್ರಶ್ನಾರ್ಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಪೊಲೀಸರ ಬಳಿಯೂ ಗುಪ್ತದಳ ಇದೆ, ಮಾದಕ ದ್ರವ್ಯ ನಿಗ್ರಹ ಪಡೆ ಇದೆ. ಅದಕ್ಕಾಗಿ ಪ್ರತ್ಯೇಕ ಪಡೆಗಳೇ ಕೆಲಸ ಮಾಡುವಾಗ ಡ್ರಗ್‌್ಸ ತಯಾರಿಕೆ ಜಾಲ ಪತ್ತೆಯಾಗದಿರುವುದು ಯಾವುದೇ ರೀತಿಯಲ್ಲೂ ಸಮರ್ಥನಿಯವಲ್ಲ ಎಂದಿದ್ದಾರೆ.
ಕರ್ನಾಟಕ ರಾಜ್ಯವನ್ನು ಮಾದಕ ವ್ಯಸನ ಮುಕ್ತವಾಗಿಸಬೇಕು ಎಂದು ನಮ ಸರ್ಕಾರ ಪಣತೊಟ್ಟಿದೆ. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಬೆಂಬಲ ನೀಡುತ್ತಿದ್ದೇವೆ. ಯಾವುದೇ ಸಂದರ್ಭದಲ್ಲೂ ಪೊಲೀಸರಿಗೆ ಕೈಕಟ್ಟಿ ಹಾಕಿಲ್ಲ. ಹೀಗಿದ್ದರೂ ನೆರೆ ರಾಜ್ಯದ ಪೊಲೀಸರು ಇಲ್ಲಿಗೆ ಬಂದು ಕಾರ್ಯಾಚರಣೆ ನಡೆಸುವುದಾದರೆ ಮೊದಲೇ ಏಕೆ ಮುಂಜಾಗ್ರತೆ ವಹಿಸಲಿಲ್ಲ ಎಂದು ಕಿಡಿಕಾರಿದ್ದಾರೆ.
ಮಾದಕ ವಸ್ತುಗಳನ್ನು ಸಹಿಸಿಕೊಳ್ಳಬಾರದು ಎಂದು ಹಲವು ಬಾರಿ ತಾಕೀತು ಮಾಡಿದ್ದೇವೆ. ಇದರ ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ. ಹಾಗಿದ್ದರೂ ಏಕೆ ಇಂತಹ ಕೃತ್ಯಗಳು ನಡೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಮಾದಕ ವಸ್ತುಗಳ, ಸರಬರಾಜು, ಮಾರಾಟ ಮತ್ತು ಬಳಕೆಯೇ ದೊಡ್ಡ ಸವಾಲಾಗಿತ್ತು. ಅಂಥದ್ದರಲ್ಲಿ ಮಾದಕವಸ್ತುಗಳೇ ಇಲ್ಲಿ ತಯಾರಾಗುತ್ತಿವೆ ಎಂದರೆ ನಾಚಿಕೆಗೇಡು. ಇದಕ್ಕೆ ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಮೊದಲೇ ಎಚ್ಚರಿಕೆ ನೀಡಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆಯೂ ಪರಿಶೀಲಿಸುವಂತೆ ಗೃಹ ಸಚಿವರು ಸೂಚಿಸಿದ್ದಾರೆ.
