ಬೆಂಗಳೂರು, ಅ.13- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಮತ್ತೊಬ್ಬ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿದ್ದು, ಮತ್ತೆ 45 ಕೋಟಿ ರೂಪಾಯಿ ಪತ್ತೆ ಹಚ್ಚಿದ್ದಾರೆ. ಪಂಚರಾಜ್ಯಗಳ ವಿಧಾನಸಭೆ ಹಾಗೂ ಮುಂದಿನ ವರ್ಷದ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ರಾಜ್ಯದ ಬೆಂಗಳೂರು ಸೇರಿದಂತೆ ಹಲವು ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದಾರೆ. ಅಕ್ಟೋಬರ್ 12ರಂದು ಬೆಂಗಳೂರಿನ ಆರ್.ಟಿ.ನಗರ ಸೇರಿದಂತೆ ಇತರ ಭಾಗಗಳಲ್ಲಿ ತಪಾಸಣೆ ನಡೆಸಿ ನಲವತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗಿತ್ತು.
ಮತ್ತೊಂದು ಕಾರ್ಯಾಚರಣೆಯಲ್ಲಿ ಬೆಂಗಳೂರಿನ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿರುವ ಪ್ಲಾಟ್‍ವೊಂದರ ಮೇಲೆ ನಿನ್ನೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಗುತ್ತಿಗೆದಾರ ಸಂತೋಷ್ ಅವರಿಗೆ ಸೇರಿದ ಈ ಪ್ಲಾಟ್‍ನಲ್ಲಿ 45 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ.
ಆರಂಭದಲ್ಲಿ ಐದು ಮಂದಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಹಣ ಪತ್ತೆಯಾದ ಬಳಿಕ ಮತ್ತಷ್ಟು ಮಂದಿಯನ್ನು ಕರೆಸಿಕೊಂಡಿದ್ದಾರೆ. ಮೂರು ಟ್ರಂಕ್, ಮೂರು ಬ್ಯಾಗ್ ಹಾಗೂ ಎರಡು ಸೂಟ್‍ಕೇಸ್‍ನಲ್ಲಿ ಹಣವನ್ನು ಬಚ್ಚಿಡಲಾಗಿತ್ತು ಎಂಬ ಮಾಹಿತಿಗಳು ಹರಿದಾಡುತ್ತಿವೆ. ಒಟ್ಟು 15 ಮಂದಿ ಅಧಿಕಾರಿಗಳು ತಡ ರಾತ್ರಿವರೆಗೂ ತಪಾಸಣೆ ನಡೆಸಿ 32 ಬಾಕ್ಸ್‍ಗಳಲ್ಲಿ ಹಣವನ್ನು ತುಂಬಿಕೊಂಡು ಹೋಗಿದ್ದು, ಹಣದ ಬಗ್ಗೆ ಮಾಹಿತಿ ನೀಡುವಂತೆ ಸಂತೋಷ್‍ಗೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆ ಕಾಮಗಾರಿಗಳಿಗೆ ಬಾಕಿ ಇದ್ದ ಬಿಲ್ ಪಾವತಿಗೆ ಕಮಿಷನ್ ಪಡೆಯಲಾಗುತ್ತಿದೆ. ಅದರಿಂದ ಸಂಗ್ರಹಿಸಿದ ಹಣವನ್ನು ಬೇರೆ ಬೇರೆ ಕಡೆ ಇರಿಸಲಾಗಿದ್ದು, ಅದರ ಜಾಡು ಹಿಡಿದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಆರ್.ಟಿ.ನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಡೆಸಿದ ವಿಚಾರಣೆಯ ಮಾಹಿತಿ ಆಧಾರಿಸಿ ಆದಾಯ ತೆರಿಗೆ ಅಧಿಕಾರಿಗಳು ಮತ್ತಷ್ಟು ಮಂದಿಯ ಮೇಲೆ ಕಣ್ಣಿಟ್ಟಿದ್ದರು. ಎರಡು ಕಾರ್ಯಾಚರಣೆಯಲ್ಲಿ ಒಟ್ಟು 80 ಕೋಟಿ ರೂಪಾಯಿಗೂ ಅಕ ಮೊತ್ತದ ಹಣ ಪತ್ತೆ ಮಾಡಿದ್ದಾರೆ ಎಂಬ ಮಾಹಿತಿ ಇದೆ.
ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು
ವಿಚಾರಣೆಯ ವೇಳೆ ಈ ಹಣ ವಿಧಾನಪರಿಷತ್‍ನ ಮಾಜಿ ಸದಸ್ಯ ಕಾಂತರಾಜು ಅವರಿಗೆ ಸೇರಿದೆ ಎಂದು ಸಂತೋಷ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಕಾಂತರಾಜು ಅವರು ಸಂತೋಷ್ ಯಾರು ಎಂದು ತಮಗೆ ಗೋತ್ತೆ ಇಲ್ಲ, ನಾನು ಆತನನ್ನು ನೋಡಿಯೇ ಇಲ್ಲ. ಆದಾಯ ತೆರಿಗೆ ಅಧಿಕಾರಿಗಳ ದಾಳಿಯಲ್ಲಿ ಸಿಕ್ಕ ಹಣಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ನೆಲಮಂಗಲದ ನನ್ನ ಮನೆಯಲ್ಲೇ ಇದ್ದೇನೆ, ಆದಾಯ ತೆರಿಗೆ ದಾಳಿಗೆ ಸಂಬಂಧಪಟ್ಟಂತೆ ನನಗೆ ಯಾವ ನೋಟಿಸ್ ಬಂದಿಲ್ಲ. ನನಗೆ ಯಾವ ಸಹೋದರರು ಇಲ್ಲ, ಹೀಗಾಗಿ ನನ್ನ ಸಹೋದರರನ್ನು ವಿಚಾರಣೆ ನಡೆಸುವ ಸಾಧ್ಯತೆಯೂ ಇಲ್ಲ ಎಂದಿದ್ದಾರೆ.