ಬೆಂಗಳೂರು, ಮೇ 25- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ವಿಧಾನಪರಿಷತ್‌ನ ಸದಸ್ಯತ್ವ ಸ್ಥಾನ ಸಿಕ್ಕೇ ಸಿಗುತ್ತದೆ. ಅದರಲ್ಲಿ ಎರಡು ಮಾತಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಜಾತಿವಾರು ಹಾಗೂ ಪ್ರಾಂತ್ಯವಾರು ಅವಕಾಶ ನೀಡುವ ಬಗ್ಗೆ ಚರ್ಚೆಗಳಾಗಿವೆ. ನಾವು ನಮ್ಮ ಸಲಹೆಗಳನ್ನು ನೀಡಿದ್ದೇವೆ ಎಂದರು.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಂಗಳೂರು ಕರಾವಳಿ ಕರ್ನಾಟಕ ಸೇರಿದಂತೆ ಎಲ್ಲಾ ಪ್ರಾಂತ್ಯವಾರು ಆಯ್ಕೆಗಳಾಗಬೇಕು. ಬೆಂಗಳೂರಿನವರನ್ನು ಮಾತ್ರ ಪರಿಗಣಿಸುವುದು ಸರಿಯಲ್ಲ. ಅದೇ ರೀತಿ ಜಾತಿ ಸಮುದಾಯವಾರು ಹಂಚಿಕೆ ಮಾಡಬೇಕು ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿ ಲಂಬಾಣಿ ಸಮುದಾಯದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
ಆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು. ಅಲ್ಪಸಂಖ್ಯಾತರ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಜಾತಿ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಾಯಕರಿಗೆ ಸಲಹೆ ನೀಡಿದ್ದೇನೆ ಎಂದರು.
ಕೆಲ ಸದಸ್ಯರ ಪುನರ್ ಆಯ್ಕೆ ಅನಿವಾರ್ಯ. ಹಾಗೆಯೇ ಹೊಸಬರನ್ನು ಗುರುತಿಸದೇ ಇದ್ದರೆ ಪಕ್ಷ ಸಂಘಟನೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಕನಿಷ್ಟ ನಾಲ್ಕೈದು ಜನರಿಗಾದರೂ ಹೊಸಬರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.