Sunday, December 1, 2024
Homeರಾಜ್ಯನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ : ಕೆ.ಎನ್‌.ರಾಜಣ್ಣ

ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ : ಕೆ.ಎನ್‌.ರಾಜಣ್ಣ

ಹಾಸನ ಮೇ 25- ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮಗೆ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಹಾಗೂ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ದೆಹಲಿಯಲ್ಲಿ ನಡೆದ ಚರ್ಚೆಯ ಬಗ್ಗೆ ಹೈಕಮಾಂಡ್‌ 3 ವಿಚಾರಗಳನ್ನು ಹೇಳಿತ್ತು. ಅದರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ.

ಡಿ.ಕೆ.ಶಿವಕುಮಾರ್‌ ಏಕೈಕ ಉಪಮುಖ್ಯಮಂತ್ರಿ, ಲೋಕಸಭಾ ಚುನಾವಣೆವರೆಗೂ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮುಂದುವರೆಸಲಾಗುವುದು ಎಂದು ತಿಳಿಸಿತ್ತು. ಯಾರೇ ಆದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್‌ ನನ್ನನ್ನು ಆಯ್ಕೆ ಮಾಡುವುದಾದರೆ ತನು-ಮನ ಪೂರ್ವಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಯಾವುದೇ ರಾಜಕೀಯ ಅಧಿಕಾರವನ್ನೂ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನಪರಿಷತ್‌ ಚುನಾವಣೆಯಲ್ಲಿ ಅವಕಾಶ ವಂಚಿತರಿಗೆ ಮಣೆ ಹಾಕಬೇಕು. ಯಾರಿಗೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಅಥವಾ ಈವರೆಗೂ ವಿಧಾನಪರಿಷತ್‌, ವಿಧಾನಸಭೆಯಲ್ಲಿ ಪ್ರಾತಿನಿಧ್ಯ ದೊರೆಯದೆ ಇರುವ ತಳ ಸಮುದಾಯದವರಿಗೆ ಅವಕಾಶ ನೀಡಬೇಕು. ನನ್ನ ಕಡೆಯಿಂದ ಯಾವ ಅಭ್ಯರ್ಥಿಯೂ ಇಲ್ಲ ಎಂದು ಪ್ರತಿಪಾದಿಸಿದರು.

ಪೆನ್‌ಡ್ರೈವ್‌ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಎಲ್ಲಿದ್ದಾರೆ ಎಂದು ಕೇಂದ್ರಸರ್ಕಾರ, ರಾಜ್ಯಸರ್ಕಾರ, ಎಸ್‌‍ಐಟಿ ಎಲ್ಲರಿಗೂ ಗೊತ್ತಿದೆ. ಆದರೆ ಕಾನೂನು ಪ್ರಕಾರ, ಸಹಜ ನ್ಯಾಯದಂತೆ ಆರೋಪಿಗೆ ಕಾಲಾವಕಾಶ ನೀಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕಾನೂನಿನ ಲೋಪಗಳಾಗದಂತೆ ಈಗಿನಿಂದಲೇ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು.

ಪೆನ್‌ಡ್ರೈವ್‌ ಅನ್ನು ಬಿಡುಗಡೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ವಾದಗಳು ನಡೆಯುತ್ತಿವೆ. ಈ ಹಿಂದೆ ರಮೇಶ್‌ ಜಾರಕಿಹೊಳಿ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಬಿಡುಗಡೆ ಮಾಡಿದವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತವೆ. ರಾಜ್ಯದಲ್ಲಿ ಪೆನ್‌ಡ್ರೈವ್‌ಗಳ ಜನಕ ಎಂದರೆ ಅದು ಎಚ್‌.ಡಿ.ಕುಮಾರಸ್ವಾಮಿ ಎಂದು ಟೀಕಿಸಿದರು.

ಪ್ರಜ್ವಲ್‌ ರೇವಣ್ಣ ಅವರ ವಿಚಾರಕ್ಕೆ ಸಂಬಂಧಪಟ್ಟಂತೆ ಎಷ್ಟು ವಿಡಿಯೋಗಳಿವೆ, ಎಷ್ಟು ಜನ ಸಂತ್ರಸ್ತೆಯರು ಎಂಬುದನ್ನು ಖುದ್ದು ಅವರೇ ಹೇಳಬೇಕು. ನಾನಂತೂ ಇಂತ ವಿಚಾರಗಳಿಂದ ದೂರ. ಯಾರಾದರೂ ಹೆಣ್ಣು ಮಗಳು ಕರೆ ಮಾಡಿ, ನಾನು ಬೆಳಗಾವಿ, ಬಾಗಲಕೋಟೆ ಎಂದು ಹೇಳಿಕೊಂಡರೆ, ಪಕ್ಷದ ಕಾರ್ಯಕರ್ತೆ ಎಂದು ಪರಿಚಯಿಸಿಕೊಂಡರೆ ತಕ್ಷಣವೇ ನಾನು ಆ ನಂಬರ್‌ಗಳನ್ನು ಬ್ಲಾಕ್‌ ಮಾಡುತ್ತೇನೆ. ನನ್ನ ಮೊಬೈಲ್‌ ಬೇಕಾದರೆ ನಿಮಗೆ ಕೊಡುತ್ತೇನೆ, ಎಷ್ಟು ಬ್ಲಾಕ್‌ ನಂಬರ್‌ಗಳಿವೆ ಎಂದು ಪರಿಶೀಲಿಸಿ ಎಂದು ಪತ್ರಕರ್ತರಿಗೆ ಹೇಳಿದರು.

ಹನಿಟ್ರಾಪ್‌ ಸೇರಿದಂತೆ ಏನೇನೋ ವಿಚಾರಗಳು ಕೇಳಿಬರುತ್ತಿವೆ. ತೇಜೋವಧೆ ಮಾಡುವ ವಿಚಾರಗಳು ರಾಜಕೀಯದಲ್ಲಿ ನಿರಂತರ. ಹಾಗಾಗಿ ನಾವು ಎಚ್ಚರಿಕೆಯಿಂದಿರುವುದು ಅಗತ್ಯ ಎಂದರು. ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶಕ್ಕೆ ಹೋಗಲು ಕಳುಹಿಸಿಕೊಟ್ಟಿದ್ದು ದೇವೇಗೌಡರು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈಗ ದೇವೇಗೌಡರು ಎಚ್ಚರಿಕೆ ಪತ್ರ ಬರೆದಿರಬಹುದು. ರೇವಣ್ಣ ಕುಟುಂಬ ಮತ್ತು ತಮ್ಮ ಕುಟುಂಬ ಬೇರೆ ಎಂದು ಕುಮಾರಸ್ವಾಮಿಯವರು ಹೇಳಿದ್ದರು. ಈಗ ದೇವೇಗೌಡರು ಯಾವ ಕುಟುಂಬವನ್ನು ಪ್ರಸ್ತಾಪಿಸಿ ಪತ್ರ ಬರೆದಿದ್ದಾರೆ ಎಂದು ತಮಗೆ ಮಾಹಿತಿ ಇಲ್ಲ ಎಂದು ರಾಜಣ್ಣ ಹೇಳಿದರು.

ಪೆನ್‌ಡ್ರೈವ್‌ ಪ್ರಕರಣದಿಂದ ರಾಜಕೀಯ ಲಾಭವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹಾಸನದಲ್ಲಿ ಕಾಂಗ್ರೆಸ್‌‍ಗೆ ಒಳ್ಳೆಯ ಅಭ್ಯರ್ಥಿಯಿದ್ದಾರೆ. 30 ವರ್ಷಗಳಿಂದ ಒಂದೇ ಕುಟುಂಬದಲ್ಲಿರುವ ಹಿಡಿತವನ್ನು ತಪ್ಪಿಸಲು ಜನ ಈ ಬಾರಿ ನಮ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಲಿಂಕ್‌ಕೆನಲ್‌ ಮೂಲಕ ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದರಿಂದ ತುಮಕೂರು, ಕೊರಟಗೆರೆ, ಮಧುಗಿರಿ, ಗುಬ್ಬಿ, ತುರುವೇಕೆರೆ ಸೇರಿದಂತೆ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆಯಾಗುತ್ತಿದೆ. ಇದಕ್ಕೆ ನಮ ವಿರೋಧವಿದೆ. ಮುಖ್ಯಮಂತ್ರಿಯ ಬಳಿ ಈ ವಿಚಾರವಾಗಿ ಚರ್ಚೆ ಮಾಡುತ್ತೇನೆ ಎಂದರು.ಮಾದಕ ವಸ್ತುಗಳ ಪಿಡುಗನ್ನು ತಪ್ಪಿಸಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಮತ್ತಷ್ಟು ಕ್ರಮಗಳು ಅಗತ್ಯ ಎಂದು ಹೇಳಿದರು.

RELATED ARTICLES

Latest News