Monday, November 25, 2024
Homeರಾಷ್ಟ್ರೀಯ | National7 ದಿನಗಳವರೆಗೆ ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್‌ ಅರ್ಜಿ

7 ದಿನಗಳವರೆಗೆ ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್‌ ಅರ್ಜಿ

ನವದೆಹಲಿ, ಮೇ 27- ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣದ ವರ್ಗಾವಣೆ ಪ್ರಕರಣದಲ್ಲಿ ತಮಗೆ ನೀಡಿರುವ ಮಧ್ಯಂತರ ಜಾಮೀನನ್ನು 7 ದಿನಗಳವರೆಗೆ ವಿಸ್ತರಿಸುವಂತೆ ಕೋರಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಎಸ್ಸಿಗೆ ಅರ್ಜಿ ಸಲ್ಲಿಸಿದ್ದಾರೆ.

ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಪಿಇಟಿ-ಸಿಟಿ ಸ್ಕ್ಯಾನ್‌ ಮತ್ತು ಇತರ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಅತ್ಯಗತ್ಯ ಎಂದು ಹೇಳಿ ಜಾಮೀನು ವಿಸ್ತರಣೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಆಮ್‌ ಆದಿ ಪಕ್ಷ (ಎಎಪಿ) ಹೇಳಿದೆ.

ಮ್ಯಾಕ್‌್ಸ ಆಸ್ಪತ್ರೆಯ ವೈದ್ಯಕೀಯ ತಂಡ ಈಗಾಗಲೇ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಿದೆ. ಈ ಪರೀಕ್ಷೆಗಳು ಅವರ ಯೋಗಕ್ಷೇಮದ ವಿಚಾರಕ್ಕೆ ನಿರ್ಣಾಯಕ ಅಂಶಗಳಾಗಿವೆ ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ವಾದಿಸಿದ್ದಾರೆ. ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಜಾಮೀನು ವಿಸ್ತರಣೆ ಬೇಕಿದ್ದು, ವಿಸ್ತರಣೆಯನ್ನು ಪರಿಗಣಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ಪ್ರಮುಖ ಕಿಂಗ್ಪಿನ್‌ ಎನ್ನುವ ಆರೋಪ ಹೊತ್ತಿರುವ ಅರವಿಂದ್‌ ಕೇಜ್ರಿವಾಲ್‌‍ಗೆ ಇತ್ತೀಚೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು. ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಕೊನೆಯ ಹಂತದ ಮತದಾನದ ಒಂದು ದಿನದ ನಂತರ ಜೂನ್‌ 2 ರಂದು ದೆಹಲಿ ಸಿಎಂ ತಿಹಾರ್‌ ಜೈಲಿನಲ್ಲಿ ಶರಣಾಗಬೇಕಾಗುತ್ತದೆ.

ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೆಂಕೋರ್ಟ್‌, ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ನಿರ್ಧಾರ ಸೂಕ್ತ, ಅವರಿಗೆ ಯಾವುದೇ ಅಪರಾಧ ಇತಿಹಾಸವಿಲ್ಲ. ಅವರು ಸಮಾಜಕ್ಕೆ ಬೆದರಿಕೆಯಲ್ಲ, ಅವರ ವಿರುದ್ಧ ಗಂಭೀರ ಆರೋಪಗಳಿವೆ ಆದರೆ ಅದ್ಯಾವುದರಲ್ಲೂ ಸಾಬೀತಾಗಿ ಶಿಕ್ಷೆಯಾಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೆ ಯಾವುದೇ ಸಾಕ್ಷಿ ಜತೆ ಮಾತನಾಡದಂತೆ ಸೂಚಿಸಿತ್ತು.

ಮೇ 17 ರಂದು, ಜಾರಿ ನಿರ್ದೇಶನಾಲಯವು (ಇಡಿ) ಕೇಜ್ರಿವಾಲ್‌ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿತ್ತು. ಈ ವೇಳೆ ಸಾಮಾನ್ಯ ಜಾಮೀನಿಗಾಗಿ ಕೆಳ ನ್ಯಾಯಾಲಯವನ್ನು ಸಂಪರ್ಕಿಸಲು ನ್ಯಾಯಾಲಯ ಅವರಿಗೆ ಅನುಮತಿ ನೀಡಿತ್ತು.

ಕೇಜ್ರಿವಾಲ್‌ ಅಲ್ಲದೆ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತನಿಖಾ ಸಂಸ್ಥೆ ಮನೀಶ್‌ ಸಿಸೋಡಿಯಾ ಅವರನ್ನು ಕೂಡ ಬಂಧಿಸಿದೆ. ಅವರು ಈಗ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಎಎಪಿ ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್‌ ಅವರನ್ನೂ ಬಂಧಿಸಲಾಗಿತ್ತು. ಆದರೆ, ಅವರು ಸುಪ್ರೆಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಬಕಾರಿ ನೀತಿ ಪ್ರಕರಣವನ್ನು ಸಂಪೂರ್ಣ ನಕಲಿ ಎಂದು ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಬಂಧಿಸಿರುವ ಎಲ್ಲರನ್ನು ಈಗಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ತಾವು ಸಂಜಯ್‌ ಸಿಂಗ್‌ ಮತ್ತು ಮನೀಶ್‌ ಸಿಸೋಡಿಯಾ ಅವರೊಂದಿಗೆ 2021-22ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ಎಂದು ಹೇಳಿದರು. ದೇಶಾದ್ಯಂತ 500 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ. ಹಲವರನ್ನು ಬಂಧಿಸಲಾಗಿದೆ. ಆದರೂ ಕೂಡ ಯಾವುದೇ ಸಾಕ್ಷಿಗಳು ಕಂಡುಬಂದಿಲ್ಲ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

RELATED ARTICLES

Latest News