ಹುಳಿಯಾರು, ಮೇ 28- ಪಟ್ಟಣದಲ್ಲಿ ಒಂದು ವಾರದಿಂದ ಒಂಟಿ ವಾನರನ ಉಪಟಳ ಹೆಚ್ಚಾಗಿದ್ದು, ಈಗಾಗಲೇ ಐದಾರು ಮಂದಿಯನ್ನು ಕಡಿದಿರುವುದರಿಂದ ಗ್ರಾಮಸ್ಥರು ಭಯಬೀತರಾಗಿದ್ದಾರೆ.
ಅರಣ್ಯ ಇಲಾಖೆಯವರು ಕೋತಿ ಸೆರೆಯಿಡಿದು ನಿರ್ಭಯವಾಗಿ ಜನ ಓಡಾಡುವಂತೆ ಮಾಡಬೇಕಿದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ.ಒಂದು ವಾರದ ಹಿಂದೆ ಪಟ್ಟಣಕ್ಕೆ ಬಂದಿರುವ ಈ ಕೋತಿಯ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮೊದಮೊದಲು ಅಂಗಡಿಗಳಿಗೆ ನುಗ್ಗುತ್ತಿದ್ದ ಕೋತಿ ಇಷ್ಟ ಬಂದ ಪದಾರ್ಥಗಳನ್ನು ತಿಂದು ಹೋಗುತ್ತಿತ್ತು. ಆದರೆ ಈಗ ಹೋಟೆಲ್, ಅಂಗಡಿಗಳಿಗೆ ನುಗ್ಗಿ ದಾಂದಲೆ ಮಾಡುತ್ತಿದೆ. ಸಿಕ್ಕಿದನ್ನೆಲ್ಲಾ ಕಿತ್ತು ಚೆಲ್ಲಾಡಿ ಅಪಾರ ನಷ್ಟ ಉಂಟುಮಾಡುತ್ತಿದೆ. ಕೋತಿಗಳ ಈ ಕಾಟದಿಂದಾಗಿ ಜನರು ಹೈರಾಣಾಗಿ ಹೋಗಿದ್ದಾರೆ.
ಬಸ್ ನಿಲ್ದಾಣದಲ್ಲಂತೂ ಪ್ರಾಯಾಣಿಕರ ನೆಮದಿ ಕಿತ್ತುಕೊಳ್ಳುತ್ತಿದೆ. ಬಸ್ ಒಳಗೆ ಹತ್ತಿ ಎಲ್ಲರನ್ನೂ ಗಾಭರಿ ಮಾಡುತ್ತಿದೆ. ಪ್ರಾಯಾಣಿಕರ ಕೈ ಚೀಲ ಕಿತ್ತುಕೊಳ್ಳುವುದು, ಮಕ್ಕಳ ಮೇಲೆ ಎಗರುವುದು ಹೀಗೆ ಈ ಕಪಿಯ ಚೇಷ್ಟೆಯಿಂದಾಗಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.
ಮನೆಯ ಮುಂದೆ ಒಣಹಾಕಿದ ದವಸ-ಧಾನ್ಯಗಳೆಲ್ಲ ಕೋತಿ ಪಾಲಾಗುತ್ತಿವೆ.
ಬಟ್ಟೆಗಳನ್ನು ಎತ್ತಿಕೊಂಡು ಹೋಗುತ್ತಿವೆ. ಮನೆಯ ಮೇಲೆ ಕೋತಿಗಳು ಮಾಡುತ್ತಿರುವ ದಾಂಧಲೆಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಕೋತಿಯ ಕಾಟದಿಂದ ಮುಕ್ತಿ ಕೊಡಿಸುವಂತೆ ಅರಣ್ಯ ಇಲಾಖೆಗೆ ಹುಳಿಯಾರು ಜನ ಮನವಿ ಮಾಡಿದ್ದಾರೆ.