ಬೆಂಗಳೂರು, ಮೇ 29- ಕಳೆಯಿತು ಬೇಸಿಗೆ ರಜೆ, ನಡೆಯಿರಿ ಶಾಲೆಯೆಡೆಗೆ ಎಂದು ಮಕ್ಕಳು ಇಂದು ಒಲ್ಲದ ಮನಸ್ಸಿನಿಂದ ಶಾಲೆಗೆ ತೆರಳಿದರು. ಕಳೆದ ಎರಡು ತಿಂಗಳಿಂದ ಶಾಲೆಗಳಿಗೆ ರಜೆ ಇದ್ದು, ಮಕ್ಕಳು ಖುಷಿಖುಷಿಯಿಂದ ಆಟ, ಊರುಗಳಲ್ಲಿ ಕಾಲ ಕಳೆದಿದ್ದು, ಇಂದಿನಿಂದ ಅದೇ ಪಾಠ, ಓದು, ಬ್ಯಾಗ್‌ಗಳನ್ನು ಹೊತ್ತು ಶಾಲೆಗೆ ಹೋಗಬೇಕಲ್ಲ ಎಂದು ಕೆಲ ಮಕ್ಕಳು ಅತ್ತು ಸುರಿಯುತ್ತ ಶಾಲೆಗೆ ಹೋದ ದೃಶ್ಯಗಳು ಕಂಡುಬಂದವು.
ಮೊದಲ ದಿನವಾದ ಇಂದು ಪೋಷಕರು ತಮ್ಮತಮ್ಮ ಮಕ್ಕಳನ್ನು ಶಾಲೆಗಳಿಗೆ ಕರೆತಂದು ಬಿಟ್ಟರು. ಶಾಲೆಗಳನ್ನು ಸಹ ಅದ್ಧೂರಿಯಾಗಿ ಸಿಂಗರಿಸಿ ಶಿಕ್ಷಕರು ಮಕ್ಕಳಿಗೆ ಗುಲಾಬಿ ಹೂ, ಸಿಹಿ ಹಂಚಿ ಬರಮಾಡಿಕೊಂಡರು.
ಹೊಸದಾಗಿ ಶಾಲೆಗಳಿಗೆ ದಾಖಲಾಗಿರುವ ನರ್ಸರಿ, ಎಲ್‌ಕೆಜಿ, ಯುಕೆಜಿ ಪುಟಾಣಿಗಳು ಶಾಲೆಯ ಸಮವಸ್ತ್ರ ಧರಿಸಿ, ಲಂಚ್ ಬ್ಯಾಗ್‌ಗಳನ್ನು ಕೈಯಲ್ಲಿಡಿದು ಪುಟ್ಟಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಕೆಲ ಮಕ್ಕಳು ಖುಷಿಯಿಂದ ಶಾಲೆಗೆ ತೆರಳುತ್ತಿದ್ದರೆ, ಮತ್ತೆ ಕೆಲ ಮಕ್ಕಳು ಅಳುತ್ತಾ ಹೋಗುತ್ತಿದ್ದ ದೃಶ್ಯಗಳು ನಗರದಲ್ಲಿ ಕಂಡುಬಂದವು.
ರಸ್ತೆಗಿಳಿದ ಶಾಲಾ ಬಸ್‌ಗಳು :
ಕಳೆದ ಎರಡು ತಿಂಗಳಿನಿಂದ ನಿಂತಲ್ಲೇ ನಿಂತಿದ್ದ ಶಾಲಾ ಬಸ್‌ಗಳು ಇಂದು ಶಾಲೆಗಳು ಪ್ರಾರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಕಾರ್ಯಾಚರಣೆಗಿಳಿದಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಬಸ್‌ಗಳ ಸಂಚಾರ ಹೆಚ್ಚಿನದಾಗಿ ಕಂಡುಬಂದಿತು.
ಇನ್ನು ಗ್ರಾಮೀಣ ಪ್ರದೇಶಗಳಲ್ಲೂ ಸಹ ಮಕ್ಕಳು ಖಾಸಗಿ ಹಾಗೂ ಸರ್ಕಾರಿ ಶಾಲೆಯ ಮಕ್ಕಳು ಶಾಲೆಗೆ ತೆರಳುತ್ತಿದ್ದ ದೃಶ್ಯ ಸರ್ವೆಸಾಮಾನ್ಯವಾಗಿತ್ತು.