ಬೆಂಗಳೂರು, ಜೂ.2-ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ 7 ಸ್ಥಾನಗಳಿಗೆ ಇಂದು ಸಂಜೆ ವೇಳೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಹಾಗೂ ಎನ್.ಎಸ್.ಬೋಸರಾಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಅವರಿಗೆ ಅವಕಾಶಗಳು ಸಿಗುವ ಸಾಧ್ಯತೆಗಳು ದಟ್ಟವಾಗಿವೆ.
ಪ್ರಸ್ತುತ ಚುನಾವಣೆ ನಡೆಯುತ್ತಿರುವ 7 ಸ್ಥಾನಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ತೆರವಾಗಿರುವ ಮತ್ತೊಂದು ಸ್ಥಾನಕ್ಕೂ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಆ ಕ್ಷೇತ್ರವನ್ನೂ ಒಳಗೊಂಡಂತೆ ಒಟ್ಟು 8 ಮಂದಿಯ ಪಟ್ಟಿಯನ್ನು ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗಿದೆ.
7 ಸ್ಥಾನಗಳಿಗೆ ಸುಮಾರು 300 ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕಾಂಗ್ರೆಸ್ ಅಳೆದೂ ತೂಗಿ 80 ಮಂದಿಯ ಸಂಭವನೀಯ ಪಟ್ಟಿಯನ್ನು ತಯಾರಿಸಿತ್ತು. ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೂರು ದಿನಗಳ ಕಾಲ ಬೀಡುಬಿಟ್ಟು ಹೈಕಮಾಂಡ್ ಜೊತೆ ಚರ್ಚಿಸಿದ ಬಳಿಕ 1:2 ಅನುಪಾತದ ಆಧಾರದ ಮೇಲೆ 14 ಜನರ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಅದರಲ್ಲಿ ಮೂಲಗಳ ಪ್ರಕಾರ, ಯತೀಂದ್ರ, ಬೋಸ್‌ರಾಜ್, ಗೋವಿಂದರಾಜು ಅವರ ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಚಿಕ್ಕಮಗಳೂರಿನವರಾದ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಕುಮಾರ್, ಬಾಗಲಕೋಟೆಯ ಇಸಾಯಿಲ್ ಟಮಟ್ಕರ್ ಸೇರಿದಂತೆ ಹಲವರ ಹೆಸರುಗಳಿವೆ.
ಈ ಬಾರಿ ಮಹಿಳೆಯರಿಗೆ ಅವಕಾಶ ನಿರಾಕರಿಸುವ ಸಾಧ್ಯತೆಗಳಿವೆ. ವಿಧಾನಸಭೆ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಅವಕಾಶ ಸಿಗಬೇಕು ಎಂಬ ಒತ್ತಾಸೆಗಳಿವೆ. ಕೆಪಿಸಿಸಿಯ ಆಡಳಿತಾತಕ ಪ್ರಧಾನ ಕಾರ್ಯದರ್ಶಿ ವಿಜಯ್ ಕೆ. ಮುಳಗುಂದ್, ಖಚಾಂಜಿ ವಿನಯ್ ಕಾರ್ತಿಕ್ ಅವರ ಹೆಸರುಗಳು ತೀವ್ರವಾಗಿ ಕೇಳಿಬಂದಿದೆ.11 ಸ್ಥಾನಗಳಲ್ಲಿ ಕಾಂಗ್ರೆಸ್‌ನ ಅರವಿಂದ್ ಕುಮಾರ್ ಅರಳಿ, ಎನ್.ಎಸ್.ಬೋಸರಾಜ್, ಕೆ.ಗೋವಿಂದರಾಜು, ಕೆ.ಹರೀಶ್‌ಕುಮಾರ್ ನಿವೃತ್ತರಾಗುತ್ತಿದ್ದಾರೆ.
ಅರವಿಂದ್ ಕುಮಾರ್ ಅರಳಿ, ಕೆ.ಹರೀಶ್‌ಕುಮಾರ್ ಅವರು ಅವಕಾಶ ಗಿಟ್ಟಿಸುವ ಸಾಧ್ಯತೆಗಳು ಕ್ಷೀಣವಾಗಿವೆ. ಬಿಜೆಪಿಯ ಸದಸ್ಯರಾಗಿದ್ದ ಡಾ.ತೇಜಸ್ವಿನಿಗೌಡ, ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಅವರೂ ಕೂಡ ವಿಧಾನಪರಿಷತ್ ಸದಸ್ಯತ್ವಕ್ಕೆ ಲಾಬಿ ನಡೆಸಿದ್ದರು.
ಇಂದು ಬೆಳಿಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಆನ್‌ಲೈನ್ ಮೂಲಕ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಂತಿಮ ಹಂತದ ಅಭಿಪ್ರಾಯ ಸಂಗ್ರಹಿಸಿದ್ದಾರೆ.ಸಂಜೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ಪಕ್ಷದ ಶಾಸಕರಿಂದ ಪರಿಷತ್ ಅಭ್ಯರ್ಥಿಗಳ ನಾಮಪತ್ರಗಳಿಗೆ ಸೂಚಕರ ಸಹಿ ಹಾಕಿಸಲಾಗುವುದು. ಅದಕ್ಕೂ ಮೊದಲೇ ಅಭ್ಯರ್ಥಿಗಳ ಆಯ್ಕೆಯಾಗುವ ಸಾಧ್ಯತೆಗಳಿವೆ.