Friday, November 22, 2024
Homeರಾಜ್ಯಪರಿಷತ್‌ ಟಿಕೆಟ್ ಸಿಕ್ಕ ಖುಷಿಯಲ್ಲಿ ಕಣ್ಣೀರಿಟ್ಟ ಜವರಾಯಿಗೌಡ

ಪರಿಷತ್‌ ಟಿಕೆಟ್ ಸಿಕ್ಕ ಖುಷಿಯಲ್ಲಿ ಕಣ್ಣೀರಿಟ್ಟ ಜವರಾಯಿಗೌಡ

ಬೆಂಗಳೂರು, ಜೂ.3- ವಿಧಾನಸಭೆಯಿಂದ ವಿಧಾನಪರಿಷತ್‌ ಚುನಾವಣೆಗೆ ತಮನ್ನು ಅಭ್ಯರ್ಥಿ ಮಾಡಿದ ದೇವೇಗೌಡರ ಕುಟುಂಬಕ್ಕೆ ಋಣಿಯಾಗಿರುವುದಾಗಿ ಜೆಡಿಎಸ್‌‍ ಮುಖಂಡ ಜವರಾಯಿಗೌಡ ಕಣ್ಣೀರು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2009 ರಿಂದಲೂ ಯಶವಂತಪುರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. 2013, 2014, 2023 ರ ಚುನಾವಣೆಗಳಲ್ಲಿ ಸೋಲು ಕಂಡಿದ್ದೇನೆ. ವಿಧಾನಪರಿಷತ್‌ಗೆ ಆಯ್ಕೆ ಮಾಡುವುದಾಗಿ ಕುಮಾರಸ್ವಾಮಿಯವರು ತಮಗೆ ಭರವಸೆ ನೀಡಿದ್ದರು. ಈಗ ಅದನ್ನು ಉಳಿಸಿಕೊಂಡಿದ್ದಾರೆ ಎಂದರು.

ಕಾರ್ಯಕರ್ತರ ಭಾವನೆಗಳಿಗೆ ಕುಮಾರಸ್ವಾಮಿ ಸ್ಪಂದಿಸಿದ್ದಾರೆ. ಪಕ್ಷಸಂಘಟನೆಯಲ್ಲಿ ನಾನು ಅವರ ಜೊತೆಗೆ ನಿಂತು ಕೆಲಸ ಮಾಡುತ್ತೇನೆ, ಶಕ್ತಿ ನೀಡುತ್ತೇನೆ. ಅವಕಾಶ ನೀಡಿದ ದೇವೇಗೌಡರು, ಕುಮಾರಸ್ವಾಮಿ, ಜಿ.ಟಿ.ದೇವೇಗೌಡರು ಪಕ್ಷದ ಎಲ್ಲಾ ಶಾಸಕರಿಗೂ ಧನ್ಯವಾದಗಳು ಎಂದು ಭಾವುಕರಾದರು.


ಆಕಾಂಕ್ಷಿಗಳೇ ಹೆಸರು ಸೂಚಿಸಿದ್ದರು :
ಜೆಡಿಎಸ್‌‍ನಿಂದ ಜವರಾಯಿಗೌಡ ಅವರಿಗೆ ವಿಧಾನಪರಿಷತ್‌ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡುವಂತೆ ಆಕಾಂಕ್ಷಿಗಳೇ ಹೆಸರು ಸೂಚಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌‍ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವರಾಯಿಗೌಡ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.ಕುಪೇಂದ್ರ ರೆಡ್ಡಿ ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಎರಡು ಚುನಾವಣೆಗಳಲ್ಲಿ ಕಡಿಮೆ ಅಂತರದಿಂದ ಸೋಲು ಕಂಡಿದ್ದರು.
ಬಿ.ಎಂ.ಫಾರುಕ್‌ ಕೂಡ ವಿಧಾನಪರಿಷತ್‌ ಸದಸ್ಯರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಮೂರು ಮಂದಿ ಆಕಾಂಕ್ಷಿಗಳಿದ್ದರು. ಫಾರುಕ್‌ ಮತ್ತು ಕುಪೇಂದ್ರರೆಡ್ಡಿ ಇಬ್ಬರೂ ಜವರಾಯಿಗೌಡ ಅವರಿಗೆ ಅವಕಾಶ ನೀಡುವಂತೆ ಹೆಸರು ಸೂಚಿಸಿದ್ದರು ಎಂದು ಹೇಳಿದರು.
RELATED ARTICLES

Latest News