ಕನಕಪುರ, ಜೂ.6- ಸಾಲ ವಾಪಸ್ ಕೊಡುವುದಾಗಿ ಕರೆಸಿಕೊಂಡು ಮಹಿಳೆಯೊಬ್ಬರನ್ನು ಕೊಲೆ ಮಾಡಿ ರೇಷ್ಮೆ ತೋಟದಲ್ಲಿ ಹೂತುಹಾಕಿ ಆರೋಪಿಗಳು ಪರಾರಿಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚೌಕಸಂದ್ರ ಗ್ರಾಮದಲ್ಲಿ ಜರುಗಿದೆ. ಟಿ.ಗೊಲ್ಲಹಳ್ಳಿ ಗ್ರಾಮದ ವಾಸಿ ಸುನಂದಮ್ಮ(65) ಕೊಲೆಯಾದ ನತದೃಷ್ಟೆಯಾಗಿದ್ದಾರೆ.
ಇವರ ಸಮೀಪದ ಸಂಬಂಧಿಗಳು ಎನ್ನಲಾದ ತಾಲೂಕಿನ ಶ್ರೀನಿವಾಸನಹಳ್ಳಿ ಗ್ರಾಮದ ರವಿಕುಮಾರ್ ಆತನ ಪತ್ನಿ ಆಶಾ ಎಂಬುವವರಿಂದ ಈ ಹತ್ಯೆಯಾಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮೂಲತಃ ಶ್ರೀನಿವಾಸನಹಳ್ಳಿ ಗ್ರಾಮದ ದಂಪತಿಗಳು ಚೌಕಸಂದ್ರ ತಾಂಡ್ಯ ಸಮೀಪದ ವೆಂಕಟೇಶ್‌ನಾಯ್ಕ ಎಂಬುವವರ ರೇಷೆ ತೋಟವನ್ನು ಗುತ್ತಿಗೆ ಪಡೆದಿದ್ದರು. ಕಳೆದ ಐದು ತಿಂಗಳಿನಿಂದ ಇದೇ ತೋಟದ ಮನೆಯಲ್ಲಿ ರವಿಕುಮಾರ್ ಮತ್ತವರ ಪತ್ನಿ ವಾಸವಾಗಿದ್ದರು.
ಸುನಂದಮ ಅವರಿಂದ 20 ಸಾವಿರ ಸಾಲ ಪಡೆದಿದ್ದರು. ಪಡೆದ ಸಾಲವನ್ನು ವರ್ಷಗಳಿಂದ ವಾಪಸ್ಸು ನೀಡಿರಲಿಲ್ಲ. ಈ ಸಂಬಂಧ ಸಾಲ ಮರುಪಾವತಿಸುವಂತೆ ಕೇಳಲಾಗಿತ್ತು. ಆರೋಪಿ ರವಿಕುಮಾರ್ ಸುನಂದಮನಿಗೆ ಫೋನ್ ಮಾಡಿ ನಿಮ ಸಾಲದ ಹಣವನ್ನು ವಾಪಸ್ ನೀಡುವುದಾಗಿ ಹೇಳಿ ಕೋಡಿಹಳ್ಳಿಗೆ ಕರೆಸಿಕೊಂಡು ನಂತರ ತೋಟದ ಮನೆಯಲ್ಲಿ ನೀಡುವುದಾಗಿ ಕರೆದುಕೊಂಡು ಹೋಗಿ ಸಂಜೆ ಕೊಲೆ ಮಾಡಿ ರೇಷ್ಮೆ ತೋಟದಲ್ಲಿ ಗುಂಡಿ ತೆಗೆದು ಮುಚ್ಚಿದ್ದಾರೆ.
ಸುನಂದಮ್ಮ ಮನೆಗೆ ಹಿಂದಿರುಗದ ಕಾರಣ ಕುಟುಂಬದ ಸದಸ್ಯರು ಸಂಬಂಧಿಕರ ಮನೆಗಳಲ್ಲಿ ಹುಡುಕಿ ಮಾಹಿತಿ ಸಿಗದ ಕಾರಣ ದೂರವಾಣಿ ಕರೆ ಮಾಡಿ ಹಣ ನೀಡುವುದಾಗಿ ಕರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ನೋಡಿದಾಗ ಅಲ್ಲಿಯೂ ಕಾಣದ್ದರಿಂದ ಆತಂಕಗೊಂಡ ಕುಟುಂಬದವರಿಗೆ ಗ್ರಾಮದಿಂದ ಆರೆ-ಸನಿಕೆಗಳನ್ನು ತೆಗೆದುಕೊಂಡು ತೋಟಕ್ಕೆ ಹೋಗಿದ್ದಾರೆಂಬ ಸುದ್ದಿಯ ಹಿನ್ನೆಲೆಯಲ್ಲಿ ಇಡೀ ತೋಟವನ್ನೇ ಶೋಧಿಸಿದಾಗ ಗುಂಡಿ ತೆಗೆದು ಮುಚ್ಚುವ ವೇಳೆ ಮಹಿಳೆಯ ಕೂದಲು ಹೊರ ಕಾಣುತ್ತಿದ್ದರಿಂದ ಕೂಡಲೇ ಗ್ರಾಮಾಂತರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್, ಡಿವೈಎಸ್‌ಪಿ ಗಿರೀಶ್, ಸರ್ಕಲ್ ಇನ್‌್ಸಪೆಕ್ಟರ್ ಕೆ.ಎಲ್.ಕೃಷ್ಣ, ಎಸ್.ಐ.ಹೇಮಂತ್, ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ತಹಶೀಲ್ದಾರ್ ಮಹಜರು ನಂತರ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.