Friday, November 22, 2024
Homeರಾಷ್ಟ್ರೀಯ | Nationalದೆಹಲಿ : ಆಹಾರ ಸಂಸ್ಕರಣಾ ಘಟಕದಲ್ಲಿ ಬೆಂಕಿ, ಮೂವರ ಸಾವು

ದೆಹಲಿ : ಆಹಾರ ಸಂಸ್ಕರಣಾ ಘಟಕದಲ್ಲಿ ಬೆಂಕಿ, ಮೂವರ ಸಾವು

ನವದೆಹಲಿ,ಜೂ.8- ದೆಹಲಿಯ ನರೇಲಾ ಪ್ರದೇಶದಲ್ಲಿರುವ ಆಹಾರ ಸಂಸ್ಕರಣಾ ಘಟಕದಲ್ಲಿ ಬೆಳಗಿನಜಾವ 3.38ರ ಸುಮಾರಿನಲ್ಲಿ ಬೆಂಕಿ ಅವಘಢ ಸಂಭವಿಸಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಶ್ಯಾಮ್‌ (24), ರಾಮ್‌ ಸಿಂಗ್‌ (30), ಮತ್ತು ಬೀರ್ಪಾಲ್‌ (42) ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಕಾರ್ಖಾನೆಯ ಕಾರ್ಮಿಕರಾಗಿದ್ದಾರೆ.

ಭಾರೀ ಬೆಂಕಿ ಇಡೀ ಕಾರ್ಖಾನೆ ಆವರಿಸಿದ್ದರಿಂದ ಕೆಲವು ಕಾರ್ಮಿಕರು ಅದರಲ್ಲಿ ಸಿಲುಕಿಕೊಂಡಿದ್ದರು. ಒಂಬತ್ತು ಜನರನ್ನು ರಕ್ಷಿಸಿ ಹತ್ತಿರದ ಎಸ್‌‍ಎಚ್‌ಆರ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಮೂವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಸುದ್ದಿ ತಿಳಿದು 14 ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್‌‍) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೈಪ್‌ಲೈನ್‌‍ ಒಂದರಲ್ಲಿ ಅನಿಲ ಸೋರಿಕೆಯಾದ ನಂತರ ಬೆಂಕಿ ಕಾಣಿಸಿಕೊಂಡಿದೆ. ಮೂಂಗ್‌ ದಾಲ್‌ ಅನ್ನು ಹುರಿಯಲು ಬಳಸುವ ಬರ್ನರ್‌ಗಳಿಗೆ ಅನಿಲವನ್ನು ಸರಬರಾಜು ಮಾಡಲಾಗುತ್ತಿತ್ತು. ಬೆಂಕಿಯು ಕಾರ್ಖಾನೆಯೊಳಗಿನ ಕಂಪ್ರೆಸರ್‌ ಅನ್ನು ಹೆಚ್ಚು ಬಿಸಿಯಾಗಲು ಕಾರಣವಾಯಿತು, ಇದು ಸ್ಫೋಟಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಖಾನೆ ಮಾಲೀಕರಾದ ಅಂಕಿತ್‌ ಗುಪ್ತಾ ಮತ್ತು ವಿನಯ್‌ ಗುಪ್ತಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಕಳೆದ ತಿಂಗಳು ರಾಷ್ಟ್ರ ರಾಜಧಾನಿಯ ನರೇಲಾದ ಭೋರ್ಗಢ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಕಾರ್ಖಾನೆಯ ಮೂರು ಮಹಡಿಗಳಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಏತನಧ್ಯೆ, ನಿನ್ನೆ ರಿಂಗ್‌ ರಸ್ತೆಯ ಲಜಪತ್‌ನಗರದಲ್ಲಿ ಕಣ್ಣಿನ ಆಸ್ಪತ್ರೆಯ ಎರಡು ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಹೊತ್ತಿಕೊಂಡಾಗ ಕಟ್ಟಡದಲ್ಲಿ ಯಾವುದೇ ರೋಗಿಗಳು ಇರಲಿಲ್ಲ ಮತ್ತು ಆ ಸಮಯದಲ್ಲಿ ಅಲ್ಲಿದ್ದ ಕೆಲವು ಸಿಬ್ಬಂದಿ ಗಾಯಗಳಿಲ್ಲದೆ ಪಾರಾಗಿದ್ದಾರೆ.

RELATED ARTICLES

Latest News