ಬೆಂಗಳೂರು,ಜೂ.8– ನಡುರಸ್ತೆಯಲ್ಲಿ ನೇಪಾಳಿ ಯುವಕನ ಜೊತೆ ಜಗಳವಾಡಿ ಅಮಾನುಷವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ ಏಳು ಮಂದಿ ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳ್ಳಗಾಗಿದ್ದ ನೇಪಾಳ ಮೂಲದ ಧನಂಜಯ ಅಲಿಯಾಸ್ ಡೀಗರ್ (28) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಧನಂಜಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಮೇ 8ರಂದು ಬೆಳಗಿನ ಜಾವ ಹೊರಗೆ ಬಂದಿದ್ದಾನೆ. ಅದೇ ಸಂದರ್ಭದಲ್ಲಿ ಮತ್ತೊಂದು ಹೋಟೆಲ್‌ನಲ್ಲಿ ಕೆಲಸ ಮಾಡುವ ಮಂಜುನಾಥ ಮತ್ತು ಇತರೆ 7 ಮಂದಿ ಮಾತನಾಡುತ್ತಾ ಹೋಗುತ್ತಿದ್ದಾಗ ಅವರ ಬಳಿ ಸಿಗರೇಟ್ ಕೇಳಿದ್ದಾನೆ.
ತಮ್ಮ ಬಳಿ ಸಿಗರೇಟ್ ಇಲ್ಲ ಎಂದು ಹೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿ ಒಬ್ಬರನ್ನೊಬ್ಬರು ನಿಂದಿಸಿದ್ದಾರೆ. ಇಷ್ಟಕ್ಕೆ ಸುಮನಾಗದ ಧನಂಜಯ ಏಳು ಮಂದಿಯನ್ನು ಹಿಂಬಾಲಿಸಿಕೊಂಡು ಹೋಗಿ ಅವರು ವಾಸವಿದ್ದ ಮನೆಯ ಡೋರ್ ಬಳಿ ಕಲ್ಲು ಹಾಕಿದ್ದಾನೆ.
ಇದನ್ನು ಗಮನಿಸಿದ ಅವರು ತಕ್ಷಣ ಹೊರಗೆ ಬಂದು ಧನಂಜಯ್ ಮೇಲೆ ಮನಬಂದಂತೆ ಸಾರ್ವಜನಿಕ ರಸ್ತೆಯಲ್ಲಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿತ್ತು.
ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಗೆ ಜೋಗೇಂದ್ರಕುಮಾರ್ ಎಂಬುವರು ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಇದೀಗ ಏಳು ಮಂದಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.