Saturday, July 27, 2024
Homeರಾಜಕೀಯಲೋಕಸಭೆ-ವಿಧಾನಪರಿಷತ್‌ ಚುನಾವಣೆ ನಂತರ ಇಮ್ಮಡಿಗೊಂಡ ಜೆಡಿಎಸ್‌‍ ಉತ್ಸಾಹ

ಲೋಕಸಭೆ-ವಿಧಾನಪರಿಷತ್‌ ಚುನಾವಣೆ ನಂತರ ಇಮ್ಮಡಿಗೊಂಡ ಜೆಡಿಎಸ್‌‍ ಉತ್ಸಾಹ

ಬೆಂಗಳೂರು, ಜೂ.8- ಲೋಕಸಭೆ ಮತ್ತು ವಿಧಾನಪರಿಷತ್‌ ಚುನಾವಣೆ ನಂತರ ಜೆಡಿಎಸ್‌‍ ಮುಖಂಡರು ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಂಟಾಗಿದ್ದ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಜೆಡಿಎಸ್‌‍ ಪಕ್ಷದ ಮುಖಂಡರು, ಕಾರ್ಯಕರ್ತರು ಮಂಕಾಗಿ ಉತ್ಸಾಹವನ್ನೇ ಕಳೆದುಕೊಂಡಿದ್ದರು.

ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿದಿದ್ದು, ನಿರೀಕ್ಷೆಗೂ ಮೀರಿದ ಫಲ ನೀಡಿದೆ. ಹೀಗಾಗಿ ಜೆಡಿಎಸ್‌‍ ಪುಟಿದೆದ್ದಿದ್ದು, ಮೈತ್ರಿ ಟಾನಿಕ್‌ ನೀಡಿದಂತಾಗಿದೆ.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌‍ ಕಳೆಗುಂದಿದಂತೆ ವಿಧಾನಸಭೆ ಚುನಾವಣೆ ನಂತರ ಕಂಡುಬಂದಿತ್ತು. ಆದರೆ ಲೋಕಸಭಾ ಚುನಾವಣೆಗಳಲ್ಲಿ ಮೈತ್ರಿ ಪಕ್ಷಗಳಿಗೆ ಲಾಭವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌‍ನ ಸಾಂಪ್ರದಾಯಿಕ ಮತಗಳು ಒಗ್ಗೂಡಿದ್ದು ಇದಕ್ಕೆ ಪ್ರಮುಖ ಕಾರಣ.

ವಿಧಾನಪರಿಷತ್‌ನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌‍ ಜಯಭೇರಿ ಭಾರಿಸಿದೆ. ಆದರೆ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಮಿತ್ರ ಪಕ್ಷ ಬಿಜೆಪಿ ಒಂದು ಕ್ಷೇತ್ರದಲ್ಲಷ್ಟೇ ಗೆಲ್ಲಲು ಸಾಧ್ಯವಾಗಿದೆ. ಇದರಿಂದ ಬಿಜೆಪಿಗಿಂತ ಜೆಡಿಎಸ್‌‍ಗೆ ಹೆಚ್ಚಿನ ಅನುಕೂಲವಾಗುತ್ತಿದೆ.

ಕಾಂಗ್ರೆಸ್‌‍ನೊಂದಿಗೆ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯದೆ ಅಸಮಾಧಾನ ಉಂಟಾಗುತ್ತಿತ್ತು. ಆದರೆ ಈ ಬಾರಿ ಬಿಜೆಪಿಯೊಂದಿಗಿನ ಮೈತ್ರಿ ಹೆಚ್ಚಿನ ಅನುಕೂಲವಾಗಿದ್ದು, ಮುಂಬರುವ ಬಿಬಿಎಂಪಿ ನಗರ ಸ್ಥಳೀಯ ಸಂಸ್ಥೆಗಳು, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಮೈತ್ರಿಯನ್ನು ಮುಂದುವರೆಸಲು ಉತ್ಸುಕವಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಬಹುಮತದಿಂದ ಚುನಾಯಿತರಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟ ಸೇರುತ್ತಿರುವುದು ಪಕ್ಷದಲ್ಲಿನ ಉತ್ಸಾಹವನ್ನ ಮತ್ತಷ್ಟು ಹೆಚ್ಚಿಸಿದೆ. ಇದು ಪಕ್ಷದ ಮೇಲೆ ಪ್ರಭಾವ ಬೀರುತ್ತಿದ್ದು, ಪಕ್ಷ ಸಂಘಟನೆಯ ಜೊತೆಗೆ ಹೋರಾಟಗಳಲ್ಲೂ ಹೆಚ್ಚಿನ ಉತ್ಸಾಹದಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ತೊಡಗಿಸಿಕೊಳ್ಳಲು ಕಾತರಿಸುತ್ತಿದ್ದಾರೆ.

ಕುಮಾರಸ್ವಾಮಿಯವರು ಕೇಂದ್ರ ಸಚಿವರಾದ ನಂತರ ಪಕ್ಷದ ಸಭೆ ನಡೆಸಿ ಮುಂದಿನ ಹೋರಾಟ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಹಳೆ ಮೈಸೂರು ಭಾಗದಲ್ಲಿ ಸಿಂಹಪಾಲು ಪಡೆದಿತ್ತು. ಅದೇ ರೀತಿ ಈಗ ಬಿಜೆಪಿ-ಜೆಡಿಎಸ್‌‍ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಸಿಂಹಪಾಲು ಪಡೆದಿವೆ. ಇದನ್ನು ಇನ್ನಷ್ಟು ಹೆಚ್ಚಿಸಿ ಮುನ್ನಡೆಯುವ ಉದ್ದೇಶವನ್ನು ಮಿತ್ರಪಕ್ಷಗಳು ಹೊಂದಿವೆ. ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮಿಕೊಳ್ಳಲು ಯೋಚಿಸುತ್ತಿದೆ.

RELATED ARTICLES

Latest News