Thursday, June 20, 2024
Homeರಾಜ್ಯವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಇನ್ನೂ ಹಲವು ಸಚಿವರ ತಲೆದಂಡ..?

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಇನ್ನೂ ಹಲವು ಸಚಿವರ ತಲೆದಂಡ..?

ಬೆಂಗಳೂರು, ಜೂ.8- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣ ರಾಜ್ಯಸಚಿವ ಸಂಪುಟದ ಹಲವರ ತಲೆದಂಡದ ಮುನ್ಸೂಚನೆ ನೀಡಿದ್ದು, ಸರ್ಕಾರದ ಬುಡವನ್ನೇ ಅಲುಗಾಡಿಸುವಷ್ಟು ಬ್ರಹ್ಮಾಂಡವಾಗಿ ಬೆಳೆಯುತ್ತಿದೆ 187 ಕೋಟಿ ರೂ.ಗಳ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಅಧಿಕಾರಿಗಳು ಈಗಾಗಲೇ ನಿಗಮ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ಪಡೆದುಕೊಂಡಾಗಿದೆ. ಆದರೆ ಹಣ ವರ್ಗಾವಣೆ ಮತ್ತು ಅದು ತಲುಪಿರುವ ಮೂಲಗಳ ಬಗ್ಗೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗುತ್ತಿವೆ. ರಾಜ್ಯಸರ್ಕಾರದ ತನಿಖೆಗೆ ಎಸ್‌‍ಐಟಿ ರಚಿಸಿದೆ. ಅದೇ ಸಮಯಕ್ಕೆ ಯೂನಿಯನ್‌ ಬ್ಯಾಂಕಿನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರ ದೂರಿನ ಆಧಾರದ ಮೇಲೆ ಸಿಬಿಐ ಕೂಡ ಎಫ್‌ಐಆರ್‌ ದಾಖಲಿಸಿದೆ.

ರಾಜ್ಯಸರ್ಕಾರದ ಎಸ್‌‍ಐಟಿ ಅಧಿಕಾರಿಗಳು ತನಿಖೆಯಲ್ಲಿ ಲೋಪ ಮಾಡಿದರೆ ಮುಂದಿನ ದಿನಗಳಲ್ಲಿ ಸಿಬಿಐನ ತನಿಖೆಯ ಕುಣಿಕೆಗೆ ಸಿಲುಕಿಕೊಳ್ಳುವ ಅಪಾಯವಿದೆ.ಹೀಗಾಗಿ ಪ್ರತಿಯೊಂದನ್ನೂ ಕಾನೂನುಬದ್ಧವಾಗಿ, ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ವಿಚಾರಣೆಗೊಳಪಡಿಸಲಾಗುತ್ತಿದೆ. ಪ್ರಕರಣವನ್ನು ಬಯಲಿಗೆ ಬರುವಂತೆ ಮಾಡಿ ಆತಹತ್ಯೆ ಮಾಡಿಕೊಂಡ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಅವರು ಮರಣ ಪತ್ರದಲ್ಲಿ ಉಲ್ಲೇಖಿಸಿರುವ ಲೆಕ್ಕಾಧಿಕಾರಿ ಪರಶುರಾಮ್‌ ದುರ್ಗಣ್ಣನವರ್‌ ಅವರನ್ನು ಎಸ್‌‍ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಸ್ಫೋಟಕ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಆದರೆ, ಮಾಹಿತಿಯನ್ನು ಹೇಳಿಕೆ ರೂಪದಲ್ಲಷ್ಟೇ ಸಂಗ್ರಹಿಸದೆ ಸಂಬಂಧಿಸಿದ ನ್ಯಾಯಾಲಯಕ್ಕೆ ಆರೋಪಿ ಅಧಿಕಾರಿಯಿಂದಲೇ ಪ್ರಮಾಣಪತ್ರ ರೂಪದಲ್ಲಿ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮತ್ತಷ್ಟು ಜನರಿಗೆ ಸಂಕಷ್ಟವಾಗುವ ಸಾಧ್ಯತೆಯಿದೆ.

ಅಧಿಕಾರಿ ಪರಶುರಾಮ್‌ ಮೇ 24 ರಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಚಿವ ಶರಣಪ್ರಕಾಶ್‌ ಪಾಟೀಲ್‌ ಅವರ ಕೊಠಡಿಯಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 4.30 ರವರೆಗೂ ಸಭೆ ನಡೆಸಿದ್ದು, ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಹಾಗೂ ದಾಖಲಾತಿಗಳನ್ನು ನಾಶಪಡಿಸುವ ಕುರಿತು ಸಮಾಲೋಚನೆ ನಡೆಸಲಾಗಿದೆ ಎನ್ನಲಾಗಿದೆ.

ಸಭೆಯಲ್ಲಿ ಸಚಿವರಾದ ಶರಣಪ್ರಕಾಶ್‌ ಪಾಟೀಲ್‌, ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು ಎಂಬ ಮಾಹಿತಿ ಇದೆ.ಇದನ್ನೇ ಆಧಾರವಾಗಿಟ್ಟುಕೊಂಡಿರುವ ಪ್ರತಿಪಕ್ಷಗಳು ಸಚಿವ ಶರಣಪ್ರಕಾಶ್‌ ಪಾಟೀಲ್‌ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಜೊತೆಗೆ ಬಸವನಗೌಡ ದದ್ದಲ್‌ ಅವರನ್ನೂ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂಬ ಆಗ್ರಹಗಳು ಹೆಚ್ಚಾಗುತ್ತಿವೆ.

ನಿಗಮದ ಹಣ ಬ್ಯಾಂಕ್‌ನ ಮೂಲ ಖಾತೆಯಿಂದ ಉಪಖಾತೆಗೆ ವರ್ಗಾವಣೆಗೊಂಡು ಅಲ್ಲಿಂದ ತೆಲಂಗಾಣದ ಹಲವು ಕಂಪನಿಗಳಿಗೆ ಹಂಚಿಕೆಯಾಗಿದೆ. ಈ ಹಣವನ್ನು ಲೋಕಸಭಾ ಚುನಾವಣೆಗಾಗಿಯೇ ಬಳಕೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷ ತೆಲಂಗಾಣದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಎನ್‌.ಎಸ್‌‍.ಬೋಸರಾಜ್‌ ಅವರ ರಾಜೀನಾಮೆಗೂ ಒತ್ತಾಯಗಳು ಕೇಳಿಬರುತ್ತಿವೆ.

ಮುಂದುವರೆದ ಮಾಹಿತಿಯಲ್ಲಿ ತೆಲಂಗಾಣ ಮೂಲದಿಂದ ಹಣವನ್ನು ಕಲ್ಯಾಣ ಕರ್ನಾಟಕ ಭಾಗದ ಚುನಾವಣಾ ವೆಚ್ಚಕ್ಕೆ ಬಳಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.ಐಟಿಬಿಟಿ ಕಂಪನಿಗಳ ಹೆಸರು ಉಲ್ಲೇಖವಾಗಿರುವುದರಿಂದಾಗಿ ಪ್ರಕರಣ ಎಲ್ಲಿಂದ ಎಲ್ಲಿಗೋ ಸಂಪರ್ಕಗೊಳ್ಳುತ್ತಿದ್ದು, ಹಲವು ಸಚಿವರುಗಳ ಹೆಸರು ಥಳಕು ಹಾಕಿಕೊಳ್ಳುವಂತೆ ಮಾಡಿದೆ.ಶೋಷಿತರ ಅಭಿವೃದ್ಧಿಗಾಗಿ ಬಳಕೆಯಾಗಬೇಕಾದ ಕೋಟ್ಯಂತರ ರೂ.ಗಳು ಹಿಡಿಗಂಟಾಗಿ ವರ್ಗಾವಣೆಗೊಂಡಿರುವುದು ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆಯಾಗಿರುವುದು ತನಿಖಾಧಿಕಾರಿಗಳ ಹುಬ್ಬೇರುವಂತೆ ಮಾಡಿದೆ.

ಆರಂಭದಲ್ಲಿ ಹಣ ವರ್ಗಾವಣೆಯಾಗಿರುವುದು ತಮ ಗಮನದಲ್ಲಿರಲಿಲ್ಲ ಎಂಬ ಹೇಳಿಕೆ ನೀಡಿದ್ದ ಆಗಿನ ಸಚಿವ ನಾಗೇಂದ್ರ ವರ್ಗಾವಣೆಯಾಗಿರುವ ಹಣ ಎಲ್ಲಿಯೂ ಹೋಗಿಲ್ಲ. ಖಾಸಗಿಯಾಗಿ ಅದನ್ನು ನಗದೀಕರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹಣ ಮರಳಿ ನಿಗಮದ ಖಾತೆಗೆ ಬರಲಿದೆ ಎಂದು ಹೇಳುತ್ತಿದ್ದರು. ಹಣ ಪೋಲಾಗುವುದಿಲ್ಲ ಎಂಬುದೇ ಆಗಿದ್ದರೆ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತಹತ್ಯೆ ಮಾಡಿಕೊಳ್ಳುವ ಗಂಭೀರ ಪರಿಸ್ಥಿತಿ ಏಕಿತ್ತು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು.

ಆದರೆ ತನಿಖೆ ಆಳಕ್ಕಿಳಿದಂತೆಲ್ಲಾ ಕೋಟ್ಯಂತರ ರೂ.ಗಳನ್ನು ನುಂಗಿ ಪಂಗನಾಮ ಹಾಕುವ ಷಡ್ಯಂತರಗಳು ಒಂದೊಂದಾಗಿ ಬಯಲಾಗುತ್ತಿವೆ.ಇದರಲ್ಲಿ ಕೆಲ ಸಚಿವರಷ್ಟೇ ಅಲ್ಲ ಪ್ರಭಾವಿಗಳ ಹಸ್ತಕ್ಷೇಪವೂ ಇರುವ ಸಾಧ್ಯತೆ ಇದೆ ಎಂಬ ವದಂತಿಗಳಿವೆ.ಹೀಗಾಗಿ ವಸತಿ ನಿಗಮದ ಹಗರಣ ನಾಗೇಂದ್ರ ಅವರ ತಲೆದಂಡಕ್ಕಷ್ಟೇ ಸೀಮಿತಗೊಳ್ಳದೆ ಮತ್ತಷ್ಟು ಸಚಿವ ಸ್ಥಾನಗಳನ್ನು ಅಪೋಷಣ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಹಿಂದೇಟು ಹಾಕುತ್ತಿರುವ ಸರ್ಕಾರ :
ಪ್ರಕರಣದ ಆಳದ ಅರಿವಾಗುತ್ತಿದ್ದಂತೆ ಸರ್ಕಾರ ಸಿಬಿಐ ತನಿಖೆಯನ್ನು ಬ್ಯಾಂಕಿನ ವಹಿವಾಟಿಗೆ ಸೀಮಿತಗೊಳಿಸುವ ಪ್ರಯತ್ನ ನಡೆಸುತ್ತಿದೆ. 3 ಕೋಟಿ ರೂ.ಗಳಿಗೆ ಮೇಲ್ಪಟ್ಟ ಬ್ಯಾಂಕ್‌ ಅವ್ಯವಹಾರಗಳು ಸಹಜವಾಗಿಯೇ ಸಿಬಿಐ ತನಿಖೆಗೆ ಒಳಪಡುತ್ತವೆ. ಅದೇ ರೀತಿ ವಾಲೀಕಿ ನಿಗಮದ ಹಗರಣ ಈಗಾಗಲೇ ತನಿಖೆ ಶುರುವಾಗಿದೆ. ಆದರೆ ಇದು ಬ್ಯಾಂಕಿನ ವಹಿವಾಟಿಗಷ್ಟೇ ಸೀಮಿತಗೊಳ್ಳದೆ ಪರಿಶಿಷ್ಟ ವರ್ಗಗಳ ಕಲ್ಯಾಣ, ಸಹಕಾರ, ಹಣಕಾಸು ಸೇರಿದಂತೆ ವಿವಿಧ ಇಲಾಖೆಗಳ ನಿರ್ದೇಶನಾಲಯಗಳನ್ನು ತನಿಖೆಗೊಳಪಡಿಸಬೇಕಾದ ಸಾಧ್ಯತೆಯಿದೆ.

ಇಲಾಖೆಗಳನ್ನು ಸಿಬಿಐ ತನಿಖೆಗೊಳಪಡಿಸಲು ಸರ್ಕಾರದ ಅನುಮತಿ ಅಗತ್ಯವಿದೆ. ರಾಜ್ಯಸರ್ಕಾರ ನೀತಿ ಸಂಹಿತೆಯ ನೆಪದಲ್ಲಿ ಈವರೆಗೂ ತನ್ನ ಇಲಾಖೆಗಳ ವ್ಯಾಪ್ತಿಯ ವಿಚಾರಣೆಗೆ ಅನುಮತಿಸಿಲ್ಲ. ಒಂದು ವೇಳೆ ಪೂರ್ಣ ಪ್ರಮಾಣದ ತನಿಖೆಗೆ ಅವಕಾಶ ನೀಡಿದ್ದೇ ಆದರೆ ಮತ್ತುಷ್ಟು ಬ್ರಹಾಂಡ ಸತ್ಯಗಳು ಬಯಲಾಗುವ ಸಾಧ್ಯತೆಗಳಿವೆ.

RELATED ARTICLES

Latest News