ಬೆಂಗಳೂರು,ಜೂ.8– ಪ್ರಧಾನಿ ನರೇಂದ್ರಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಕರ್ನಾಟಕದಿಂದ ಸಚಿವ ಸ್ಥಾನ ಯಾರಿಗೆ ಸಿಗಲಿದೆ ಎಂಬ ಗುಟ್ಟು ಈಗಲೂ ಗುಟ್ಟಾಗಿಯೇ ಉಳಿದಿದೆ. ಭಾನುವಾರ ರಾತ್ರಿ7.15ಕ್ಕೆ ಮೋದಿಯವರು ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಕರ್ನಾಟಕದಿಂದ ಈ ಬಾರಿ ಕೇಂದ್ರದಲ್ಲಿ ಯಾರಿಗೆ ಸಚಿವ ಸ್ಥಾನ ಎಂಬುದು ಈ ಕ್ಷಣದವರೆಗೂ ಯಾರಿಗೂ ತಿಳಿಯದಿರುವುದು ಗೊಂದಲಕ್ಕೆ ಕಾರಣವಾಗಿದೆ.
28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಜೆಡಿಎಸ್ ಎನ್‌ಡಿಎ ಮೈತ್ರಿಕೂಟ 19 ಕ್ಷೇತ್ರಗಳನ್ನು ಗೆದ್ದಿದೆ. ಕೇಂದ್ರದಲ್ಲಿ ರಾಜ್ಯಕ್ಕೆ ಪ್ರತಿ ಬಾರಿ ಸಂಪುಟದಲ್ಲಿ ಎರಡು ಸಂಪುಟ ದರ್ಜೆ ಹಾಗೂ 2-3 ರಾಜ್ಯ ಖಾತೆಗಳು ಲಭಿಸುತ್ತಿದ್ದವು.
ಈ ಬಾರಿ ಮೋದಿ ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಊಹೆಗೂ ನಿಲುಕದ ಯಕ್ಷ ಪ್ರಶ್ನೆಯಾಗಿದೆ. ಸದ್ಯ ಎಲ್ಲಾ ನೂತನ ಸಂಸದರು ದೆಹಲಿಗೆ ದೌಡಾಯಿಸಿದ್ದರೂ ಪ್ರಧಾನಿ ಕಾರ್ಯಾಲಯದಿಂದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೂರವಾಣಿ ಕರೆ ಯಾರಿಗೂ ಬಂದಿಲ್ಲ ಎಂದು ಗೊತ್ತಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಳೇ ಮೈಸೂರು ಭಾಗದಲ್ಲಿಯಾವ ರೀತಿಯಲ್ಲಿ ಬೆಂಬಲ ಸಿಕ್ಕಿದೆಯೋ, ಅಷ್ಟೇ ಬೆಂಬಲ ಕಿತ್ತೂರ ಕರ್ನಾಟಕದಲ್ಲಿಯೂ ದೊರೆತಿದೆ. ಈ ಭಾಗದ ಏಳು ಲೋಕಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅಲ್ಲದೇ ಆಯ್ಕೆಯಾದವರಲ್ಲಿ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ವಿಧಾನಸಭೆ ಸ್ಪೀಕರ್‌ಗಳು, 5ರಿಂದ 7 ಬಾರಿ ಸಂಸದರಾದ ಘಟನುಘಟಿಗಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿ ಇರುವುದರಿಂದ ಇನ್ನೂ ನಾಲ್ಕು ವರ್ಷ ಬಿಜೆಪಿ ಶಾಸಕರಿಗೆ ಯಾವುದೇ ಅಧಿಕಾರವಿಲ್ಲ. ಸಂಸದರಾದರೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗಬಹುದೆಂಬ ಮಹತ್ವಕಾಂಕ್ಷೆಯಿಂದಲೇ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮಾಯಿ ಹಾವೇರಿ ಲೋಕಸಭೆಗೆ ಟಿಕೆಟ್ ಪಡೆದು ಪ್ರಥಮ ಬಾರಿಗೆ ಸಂಸತ್‌ಗೆ ಆಯ್ಕೆಯಾಗಿದ್ದಾರೆ.
ಇನ್ನು ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹ ಮೊದಲ ಬಾರಿ ಸಂಸತ್ ಪ್ರವೇಶಿಸುವ ಮೂಲಕ ರಾಜಕೀಯ ಮರು ಹುಟ್ಟು ಪಡೆದಿದ್ದಾರೆ. ಮೋದಿಯವರ ಎರಡನೇ ಅವಧಿ ಸರಕಾರದಲ್ಲಿ ಐದು ವರ್ಷ ಯಶಸ್ವಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಪ್ರಹ್ಲಾದ್ ಜೋಶಿ ಈಗ 5ನೇ ಬಾರಿ ಆಯ್ಕೆಯಾಗಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಇನ್ನು ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಥಮ ಬಾರಿಗೆ, ಪಿ.ಸಿ.ಗದ್ದಿಗೌಡರ 5ನೇ ಬಾರಿಗೆ, ರಮೇಶ ಜಿಗಜಿಣಗಿ 7ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಕಿತ್ತೂರ ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರುವ ಎಲ್ಲಸಂಸದರೂ ಹಿರಿಯರು, ಅನುಭವಿಗಳು ಹಾಗೂ ಉನ್ನತ ಸ್ಥಾನಗಳನ್ನು (ಗದ್ದಿಗೌಡರ, ಜಿಗಜಿಣಗಿ ಹೊರತುಪಡಿಸಿ) ಅಲಂಕರಿಸಿದ್ದಾರೆ. ಹೀಗಾಗಿ ಇವರೆಲ್ಲರೂ ಸಚಿವ ಸ್ಥಾನಕ್ಕೆ ಅರ್ಹರೇ. ಹೀಗಾಗಿ ಪೈಪೋಟಿ ಏರ್ಪಟ್ಟಿದೆ.
ಆದರೆ ಕೇವಲ ಹಿರಿತನ, ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ಹಂಚಿಕೆ ಆಗುವುದಿಲ್ಲ. ಜಾತಿ, ಪ್ರಾದೇಶಿಕತೆ ಹಾಗೂ ಪಕ್ಷದಲ್ಲಿ ಅವರಿಗೆ ಇರುವ ಸ್ಥಾನಮಾನ ಕೂಡಾ ಪರಿಗಣಿಸಲ್ಪಡುತ್ತದೆ.
ಕರ್ನಾಟಕಕ್ಕೆ 2-3 ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಅದರಲ್ಲಿ ಒಂದು ಹಳೇ ಮೈಸೂರ ಭಾಗದಲ್ಲಿಒಕ್ಕಲಿಗರಿಗೆ ಅವಕಾಶ ನೀಡಿದರೆ, ಇನ್ನೊಂದು ಸ್ಥಾನವನ್ನು ಉತ್ತರ ಕರ್ನಾಟಕದ ಲಿಂಗಾಯತರಿಗೆ ಅವಕಾಶ ನೀಡಬೇಕಾಗುತ್ತದೆ. ಆಗ ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್ ಹಾಗೂ ಬಸವರಾಜ ಬೊಮಾಯಿ ಇವರಿಬ್ಬರಲ್ಲಿ ಒಬ್ಬರಿಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚು. ಒಂದು ವೇಳೆ ರಾಜ್ಯ ಖಾತೆ ನೀಡುವುದಾದರೆ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರಿಗೂ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತದೆ.
2014, 2019ರ ಸೂತ್ರ ಪಾಲಿಸುತ್ತಾ ಎನ್‌ಡಿಎ?:
ಇನ್ನು ಬ್ರಾಹಣ ಸಮುದಾಯಕ್ಕೆ ಒಂದು ಅವಕಾಶ ನೀಡಿದರೆ, ಪ್ರಲ್ಹಾದ ಜೋಶಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದಾರೆ. ಇವರಲ್ಲಿಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಈಗಾಗಲೇ ಒಂದು ಅವಧಿಗೆ ಸಚಿವರಾಗಿ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದಲ್ಲದೇ, ರಾಜಸ್ಥಾನ ಚುನಾವಣಾ ಉಸ್ತುವಾರಿ ಹೊತ್ತು ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಹ್ಲಾದ್ ಜೋಶಿ ಅವರಿಗೆ ಹೆಚ್ಚಿನ ಅವಕಾಶಗಳಿವೆ. ಒಂದು ವೇಳೆ ದಲಿತ ಸಮುದಾಯಕ್ಕೆ ಅವಕಾಶ ಸಿಕ್ಕರೆ ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ಹೆಸರು ಮುಂಚೂಣಿಗೆ ಬರುವ ಸಾಧ್ಯತೆಯಿದೆ.
ಸಚಿವ ಸ್ಥಾನಕ್ಕೆ ಲಾಬಿ:
ಜೋಶಿಯವರ ಬೆನ್ನಿಗೆ ಪ್ರಧಾನಿ ಮೋದಿ, ಶಾ ಇದ್ದರೆ, ಬೊಮ್ಮಾಯಿ ಅವರಿಗೆ ಅಮಿತ್ ಶಾ, ಜೋಶಿ ಬೆನ್ನಿಗಿದ್ದಾರೆ. ಜಗದೀಶ ಶೆಟ್ಟರ್ ಪರ ಮಾಜಿ ಸಿಎಂ ಯಡಿಯೂರಪ್ಪ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಯಾರಿಗೆ ಅವಕಾಶ ಸಿಗಲಿದೆ, ಯಾರ ಕೈ ಮೇಲಾಗುತ್ತದೆ ಎಂಬುದಕ್ಕೆ ನಾಳೆಯವರೆಗೂ ಕಾಯಬೇಕಿದೆ.