ಬೆಂಗಳೂರು,ಜೂ.9- ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ನಡುವೆಯೇ ರಾಜ್ಯಸರ್ಕಾರ ಅವುಗಳ ಸಾಧಕ ಬಾಧಕ ಪರಿಶೀಲನೆಗಾಗಿ ಹಿರಿಯರ ಹಾಗೂ ಅನುಭವಿಗಳ ಸಮಿತಿ ರಚನೆ ಮಾಡಿ ಅನರ್ಹ ಫಲಾನುಭವಿಗಳನ್ನು ಪರಿಷ್ಕರಣೆ ಮಾಡುವ ಚಿಂತನೆಯಲ್ಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪ್ರಮುಖ ಸಚಿವರ ಸಭೆಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಔಪಚಾರಿಕ ವಿಮರ್ಶೆಯಾಗಿದ್ದು, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿದಿಲ್ಲ ಎಂಬ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
52 ಸಾವಿರ ಕೋಟಿ ರೂ.ಗಳಷ್ಟು ಹಣ ವೆಚ್ಚ ಮಾಡಿ ಜನರ ಆರ್ಥಿಕ ಸಬಲೀಕರಣಕ್ಕಾಗಿ ರೂಪಿಸಲಾದ ಯೋಜನೆಗಳು ರಾಜಕೀಯವಾಗಿ ಕಾಂಗ್ರೆಸ್‍ಗೆ ಲಾಭ ತಂದುಕೊಡಬಹುದು ಎಂಬ ಅಂದಾಜಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿಯ ಮೈತ್ರಿಯಿಂದಾಗಿ ಜಾತಿ ಸಮೀಕರಣವೇ ಮೇಲುಗೈ ಸಾಧಿಸಿದೆ. ಯೋಜನೆಯ ಲಾಭ ಪಡೆದ ಫಲಾನುಭವಿಗಳು ಕಾಂಗ್ರೆಸ್ ಜೊತೆ ನಿಲ್ಲಲಿದ್ದಾರೆ ಎಂಬ ಅಂದಾಜು ತಲೆಕೆಳಗಾಗಿದೆ.
ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡಿ ಅರ್ಹ ಫಲಾನುಭವಿಗಳಿಗೆ ಮಾತ್ರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ. ಲೋಕಸಭಾ ಚುನಾವಣೆಗೂ ಮೊದಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ವಿಮರ್ಶೆಗಳಾಗಿದ್ದವು. ಮಹಿಳೆಯರಿಗೆ ಸಂಪೂರ್ಣ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಜಾರಿಗೊಳಿಸುವ ಬದಲಾಗಿ ಬಡವರಿಗೆ ಆರ್ಥಿಕವಾಗಿ ಅಗತ್ಯವಿರುವವರಿಗೆ ಸೌಲಭ್ಯ ನೀಡಬೇಕು.
ರಾಜ್ಯವ್ಯಾಪಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬದಲಾಗಿ ಸೀಮಿತ ಅಂತರವನ್ನು ನಿಗದಿ ಮಾಡಬೇಕು. ಸರ್ಕಾರಿ ನೌಕರರು, ತೆರಿಗೆ ಪಾವತಿದಾರರು ಸೇರಿದಂತೆ ಅಗತ್ಯ ಇಲ್ಲದೇ ಇರುವವರೆಗೆ ಶಕ್ತಿ ಯೋಜನೆಯಡಿ ಕಡಿವಾಣ ಹಾಕಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಮಾತ್ರ ದೊರಕುವಂತೆ ಮಾಡಬೇಕು ಎಂಬ ಪ್ರಸ್ತಾವನೆ ಚರ್ಚೆಯಲ್ಲಿತ್ತು. ಆದರೆ ಚುನಾವಣೆ ಕಾರಣಕ್ಕಾಗಿ ಅದನ್ನು ತಡೆಹಿಡಿದಿದ್ದರು.
ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿ ಬಂದಿದ್ದರೆ ಗ್ಯಾರಂಟಿ ಯೋಜನೆಗಳು ಯಥಾರೀತಿ ಅಬಾಧಿತವಾಗಿ ಮುಂದುವರೆಯುವ ನಿರೀಕ್ಷೆಗಳಿದ್ದವು. ಕಾಂಗ್ರೆಸ್ ನಾಯಕರು 22 ಸ್ಥಾನಗಳನ್ನು ಅಂದಾಜಿಸಿದರೆ ಜನ ಗೆಲ್ಲಿಸಿದ್ದು ಕೇವಲ 9ರಲ್ಲಿ ಮಾತ್ರ. ಅವುಗಳಲ್ಲಿಯೂ ಚಾಮರಾಜನಗರ, ದಾವಣಗೆರೆ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಆಯಾ ಜಿಲ್ಲೆಗಳ ಪ್ರಭಾವಿಗಳ ವರ್ಚಸ್ಸು ಕೆಲಸ ಮಾಡಿದ್ದರೆ, ಕಲ್ಯಾಣ ಕರ್ನಾಟಕ ಭಾಗದ 5 ಜಿಲ್ಲೆಗಳಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಭಾವನಾತ್ಮಕ ಹೇಳಿಕೆಗಳು ಹಾಗೂ 371 ಜೆ ಮತ ತಂದು ಕೊಟ್ಟಿದೆ.
ಹಾಸನದಲ್ಲಿ ಪೆನ್‍ಡ್ರೈವ್ ಪ್ರಕರಣದಿಂದಾಗಿ ಮುಜುಗರಕ್ಕೊಳಗಾದ ಜೆಡಿಎಸ್ ಕಾರ್ಯಕರ್ತರು ಮತದಾನದ ಕೊನೆಯ ದಿನಗಳಲ್ಲಿ ಪ್ರಚಾರಕ್ಕೆ ಹೋಗದ ಕಾರಣ ಕಾಂಗ್ರೆಸ್ ಗೆಲುವು ಕಂಡಿದೆ ಎಂಬ ವಿಶ್ಲೇಷಣೆ ಇದೆ. ಉಳಿದಂತೆ ಗೆಲುವು ಸಾಧ್ಯವಾಗಬಹುದಾಗಿದ್ದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಂಚಖಾತ್ರಿಗಳು ಕೈ ಹಿಡಿದಿಲ್ಲ. ಹೀಗಾಗಿ ಇವುಗಳನ್ನು ಪರಿಷ್ಕರಣೆ ಮಾಡುವುದು ಸೂಕ್ತ ಎಂಬ ಒತ್ತಡ ಸಚಿವರು ಹಾಗೂ ಶಾಸಕರಲ್ಲಿ ಕೇಳಿಬಂದಿದೆ.
ಏಕಾಏಕಿ ಯೋಜನೆಗಳ ಪರಿಷ್ಕರಣೆಗೆ ಮುಂದಾದರೆ ರಾಜಕೀಯವಾಗಿ ಪ್ರತಿರೋಧ ಅನುಭವಿಸಬೇಕಾಗಬಹುದು ಎಂಬ ಕಾರಣಕ್ಕೆ ಅನುಭವಿಗಳ ಹಾಗೂ ಹಿರಿಯರ ಸಮಿತಿಯನ್ನು ರಚಿಸಿ ಸಮಗ್ರ ಅಧ್ಯಯನದ ಮೂಲಕ ವರದಿ ಪಡೆದುಕೊಂಡು ನಂತರ ಯೋಜನೆಗಳನ್ನು ಅರ್ಹಫಲಾನುಭವಿಗಳಿಗೆ ತಲುಪಿಸುವಂತೆ ಮಾಡುವುದು ಸೂಕ್ತ ಎಂಬ ಚರ್ಚೆ ನಡೆದಿದೆ.
ಪಂಚಖಾತ್ರಿಗಳಿಗೆ ಹೆಚ್ಚು ಹಣ ಬಳಕೆ ಮಾಡುವುದರಿಂದ ಶಾಸಕರಿಗೆ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಇದು ಸಹಜವಾಗಿ ಪಕ್ಷ ಸಂಘಟನೆಗೂ ತೊಂದರೆಯಾಗುತ್ತಿದೆ. ಹಾಗಾಗಿ ಪಂಚಖಾತ್ರಿಗಳ ಯೋಜನಾ ವೆಚ್ಚವನ್ನು ಕಡಿತ ಮಾಡಬೇಕು ಎಂಬ ಆಗ್ರಹ ಶಾಸಕರಿಂದ ಹೆಚ್ಚಾಗಿ ಕೇಳಿಬರುತ್ತಿದೆ. ಏಕಾಏಕಿ ಯೋಜನೆಗಳ ಪರಿಷ್ಕರಣೆಗೆ ಮುಂದಾದರೆ ಬಿಬಿಎಂಪಿ ಸೇರಿದಂತೆ ನಗರ ಮತ್ತು ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಬಹುದು. ಇದರಿಂದ ಸ್ಥಳೀಯ ನಾಯಕತ್ವ ಹಾಗೂ ಪಕ್ಷ ಸಂಘಟನೆಯ ಮೇಲೆ ಅಡ್ಡಪರಿಣಾಮವಾಗಬಹುದು ಎಂಬ ಆತಂಕವೂ ಇದೆ.
ಬಹುತೇಕ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ. ಇದೆಲ್ಲದರ ಹೊರತಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಪಂಚಖಾತ್ರಿಗಳು ನಿಲ್ಲುವುದಿಲ್ಲ ಎಂದು ಪದೇಪದೇ ಹೇಳುತ್ತಿದ್ದಾರೆ. ಮೂಲಗಳ ಪ್ರಕಾರ, ಯೋಜನೆಗಳು ನಿಲ್ಲುವುದಿಲ್ಲ. ಆದರೆ ಅರ್ಹ -Àಲಾನುಭವಿಗಳಿಗೆ ಎಂಬ ಷರತ್ತಿಗೆ ಒಳಪಟ್ಟು ವೆಚ್ಚ ಕಡಿವಾಣಕ್ಕೆ ಮಾರ್ಗಸೂಚಿ ರೂಪಿಸಲು ತಯಾರಿಗಳು ನಡೆದಿವೆ.