Monday, November 25, 2024
Homeರಾಷ್ಟ್ರೀಯ | Nationalಜುಲೈ ತಿಂಗಳಿನಲ್ಲಿ ಕೇಂದ್ರ ಬಜೆಟ್‌, ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಾಧ್ಯತೆ

ಜುಲೈ ತಿಂಗಳಿನಲ್ಲಿ ಕೇಂದ್ರ ಬಜೆಟ್‌, ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಾಧ್ಯತೆ

ನವದೆಹಲಿ,ಜೂ.10- ಕೇಂದ್ರದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರಮೋದಿ ಅವರ ಸರ್ಕಾರ ಮುಂದಿನ ಜುಲೈ ತಿಂಗಳಿನಲ್ಲಿ ಬಜೆಟ್‌ ಮಂಡನೆ ಮಾಡಲಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ 8ನೇ ವೇತನ ಆಯೋಗ ರಚನೆಯ ಘೋಷಣೆ ಮಾಡುವ ನಿರೀಕ್ಷೆ ಇದೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಜೆಟ್‌ ಮಂಡನೆ ಮಾಡುವುದು ಸಂಪ್ರದಾಯ. ಹೀಗಾಗಿ ಎನ್‌ಡಿಎ ಸರ್ಕಾರ ಜುಲೈ ನಲ್ಲಿ ಬಜೆಟ್‌ ಮಂಡಿಸುವ ವೇಳೆ ವೇತನ ಆಯೋಗ ರಚನೆಯ ಘೋಷಣೆ ಮಾಡುವ ಸಾಧ್ಯತೆ ಇದೆ.

ಪ್ರತಿ 10 ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ ವೇತನ ಆಯೋಗ ರಚನೆ ಮಾಡಿ, ಅದರ ವರದಿ ಪಡೆದು ಅನುಷ್ಠಾನ ಮಾಡಲಾಗುತ್ತದೆ. 2016ರ ಜನವರಿಯಲ್ಲಿ 7ನೇ ವೇತನ ಆಯೋಗ ವರದಿ ನೀಡಿತ್ತು. ಇದರ ಅನ್ವಯ 2026ರ ಜನವರಿಗೆ 8ನೇ ವೇತನ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಅನುಷ್ಠಾನಗೊಳ್ಳಬೇಕಿದೆ.

8ನೇ ವೇತನ ಆಯೋಗ ರಚನೆ ಮಾಡುವ ಕುರಿತು ಸರ್ಕಾರ ಇನ್ನೂ ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ. ಎನ್‌ಡಿಎ ಸರ್ಕಾರ 2.0 2023ರ ಡಿಸೆಂಬರ್‌ನಲ್ಲಿ ಈಗ 8ನೇ ವೇತನ ಆಯೋಗ ರಚನೆ ಮಾಡುವ ಪ್ರಸ್ತಾಪವಿಲ್ಲ ಎಂದು ಹೇಳಿತ್ತು. ಆದರೆ ಈಗ ಚುನಾವಣೆ ಮುಗಿದು ಎನ್‌ಡಿಎ 3.0 ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಯಾವ ನಿಲುವು ಕೈಗೊಳ್ಳಲಾಗುತ್ತದೆ? ಎಂದು ಕಾದು ನೋಡಬೇಕಿದೆ.

ಒಮ್ಮೆ ಸರ್ಕಾರ ವೇತನ ಆಯೋಗ ರಚನೆ ಮಾಡುವ ತೀರ್ಮಾನ ಮಾಡಿದರೆ ಅದು ವೇತನ, ಭತ್ಯೆ, ಪಿಂಚಣಿ ಮುಂತಾದವುಗಳನ್ನು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲು ಸುಮಾರು 12ರಿಂದ 18 ತಿಂಗಳ ಅವಧಿ ತೆಗೆದುಕೊಳ್ಳಲಿದೆ. ಇನ್ನೂ ದೇಶದಲ್ಲಿ 5 ವರ್ಷ ಲೋಕಸಭೆ ಚುನಾವಣೆ ಇಲ್ಲ. ಆದ್ದರಿಂದ ಹೊಸ ಸರ್ಕಾರ 8ನೇ ವೇತನ ಆಯೋಗ ಯಾವಾಗ ರಚಿಸಲಿದೆ? ಎಂಬುದೇ ಪ್ರಶ್ನೆ.

8ನೇ ವೇತನ ಆಯೋಗ ರಚನೆಯಾಗಿ ಅದರ ಶಿಫಾರಸು ಜಾರಿಯಾದರೆ ಸುಮಾರು 49 ಲಕ್ಷ ಸರ್ಕಾರಿ ನೌಕರರು, 68 ಲಕ್ಷ ಪಿಂಚಣಿದಾರರಿಗೆ ಸಹಾಯವಾಗಲಿದೆ. ವೇತನ, ಭತ್ಯೆಗಳು ಹೆಚ್ಚಾಗಲಿವೆ.

8ನೇ ವೇತನ ಆಯೋಗದ ಶಿಫಾರಸು ಅನ್ವಯ ಫಿಟೆಂಟ್‌ ಸೌಲಭ್ಯಗಳು ಸೇರಿ ಕೇಂದ್ರ ಸರ್ಕಾರ ನೌಕರರ ಮೂಲ ವೇತನ 8 ರಿಂದ 26 ಸಾವಿರ ರೂ. ತನಕ ಏರಿಕೆಯಾಗುವ ನಿರೀಕ್ಷೆ ಇದೆ. 7ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರಿಗೆ 2.57ರಷ್ಟು ಫಿಟೆಂಟ್‌ ಸೌಲಭ್ಯದ ಶಿಫಾರಸು ಮಾಡಿತ್ತು. ಬಳಿಕ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 18,0000 ರೂ.ಗಳಿಗೆ ಏರಿಕೆಯಾಗಿತ್ತು.

8ನೇ ವೇತನ ಆಯೋಗದ ಶಿಫಾರಸು ಜಾರಿಗೆ ಬಂದರೆ ವೇತನದ ಜೊತೆ ವಿವಿಧ ಭತ್ಯೆಗಳು, ಪಿಂಚಣಿ ವ್ಯವಸ್ಥೆಯಲ್ಲಿ ಸಹ ಬದಲಾವಣೆಯಾಗಲಿದೆ. ಬದಲಾಗುತ್ತಿರುವ ಜೀವನ ಶೈಲಿಗೆ ಅನುಗುಣವಾಗಿ ವೇತನವೂ ಏರಿಕೆಯಾಗಬೇಕಿದೆ. 8ನೇ ವೇತನ ಆಯೋಗ ರಚನೆಯಾಗಿ ಅದರ ವರದಿ ಅನುಷ್ಠಾನವಾಗಬೇಕು ಎಂದು ಸರ್ಕಾರಿ ನೌಕರರ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಕೇಂದ್ರದ ಹೊಸ ಸರ್ಕಾರ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಲಿದೆಯೇ? ಕಾದು ನೋಡಬೇಕಿದೆ.

RELATED ARTICLES

Latest News