Saturday, July 27, 2024
Homeರಾಷ್ಟ್ರೀಯಯಾರಾಗ್ತಾರೆ ಮುಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ..?

ಯಾರಾಗ್ತಾರೆ ಮುಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ..?

ನವದೆಹಲಿ,ಜೂ.10- ಮೂರನೇ ಅವಧಿಯ ನರೇಂದ್ರಮೋದಿ ಸರ್ಕಾರದ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದರಿಂದ ಬಿಜೆಪಿಯ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ಗುಜರಾತ್‌‍ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಪ್ರಕಾಶ್‌ ನಡ್ಡಾ ಅವರು ನಿನ್ನೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಿಮಾಚಲಪ್ರದೇಶದಲ್ಲಿ ಶಾಸಕರಾಗಿದ್ದ ಇವರು ಮುಖ್ಯಮಂತ್ರಿ ಪ್ರೇಮ್‌ಕುಮಾರ್‌ ಧುಮಲ್‌ ಸರ್ಕಾರದಲ್ಲಿ ಅರಣ್ಯ ಮತ್ತು ವಿಜ್ಞಾನ, ತಂತ್ರಜ್ಞಾನ ಖಾತೆಯ ಸಚಿವರಾಗಿದ್ದರು.

ಮೋದಿ ಸರ್ಕಾರ ಬಂದ ನಂತರ 2014-2019ರ ಅವಧಿಯಲ್ಲಿ ನಡ್ಡಾ ಅವರಿಗೆ ಕೇಂದ್ರ ಆರೋಗ್ಯ ಖಾತೆ ನೀಡಲಾಗಿತ್ತು. ಅಮಿತ್‌ ಶಾ ಮೋದಿ ಸಂಪುಟದ ಸೇರಿದ ಬಳಿಕ 2020ರಲ್ಲಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ನಡ್ಡಾ ಅವಧಿ 2022ಕ್ಕೆ ಅಂತ್ಯವಾಗಿದ್ದರೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವಧಿಯನ್ನು 2024ರವರೆಗೆ ವಿಸ್ತರಿಸಲಾಗಿತ್ತು.

ಬಿಜೆಪಿ ನಿಯಮದ ಪ್ರಕಾರ ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಮಂತ್ರಿಗಿರಿ ಎರಡನ್ನು ಒಬ್ಬರೇ ನಿರ್ವಹಿಸುವಂತಿಲ್ಲ. ಹೀಗಾಗಿ ಈಗ ನಡ್ಡಾ ಮರಳಿ ಸಂಪುಟ ಸೇರಿದ ಹಿನ್ನೆಲೆಯಲ್ಲಿ ಮುಂದಿನ ಬಿಜೆಪಿ ಅಧ್ಯಕ್ಷ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಹೆಸರು ಕೇಳಿ ಬಂದಿತ್ತಾದರೂ ಅವರು ಮೋದಿ ಕ್ಯಾಬಿನೆಟ್‌ನಲ್ಲಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲ ಅಗತ್ಯವಿಲ್ಲ ಎಂದು ನಡ್ಡಾ ಹೇಳಿದ್ದು ಪಕ್ಷದ ಒಳಗಡೆಯೇ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಮುಂದಿನ ಅಧ್ಯಕ್ಷ ಆರ್ಎಸ್‌‍ಎಸ್‌‍ನಿಂದ ಆಯ್ಕೆ ಆದವರು ಅಥವಾ ಆರ್ಎಸ್‌‍ಎಸ್‌‍ ಮತ್ತು ಬಿಜೆಪಿ ಜೊತೆ ಉತ್ತಮ ಸಂಬಂಧ ಹೊಂದಿರುವ ವ್‌ಯಕ್ತಿ ಆಗಬಹುದು ಎಂದು ಹೇಳಲಾಗುತ್ತಿದೆ.

ನಡ್ಡಾ ಅವರಲ್ಲದೆ, ಭೂಪೇಂದರ್‌ ಯಾದವ್‌, ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಧರ್ಮೇಂದ್ರ ಪ್ರಧಾನ್‌ ಸೇರಿದಂತೆ ಹಲವಾರು ಹಿರಿಯ ನಾಯಕರು ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಬಿಜೆಪಿಯನ್ನು ಮುನ್ನಡೆಸಲು ಹೊಸಬರಿಗೆ ದಾರಿ ಮಾಡಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯದ ಕೆಲವು ಮಾಜಿ ಸಚಿವರು ಕೂಡ ಬಿಜೆಪಿ ಪಕ್ಷದ ಉನ್ನತ ಹುದ್ದೆ ಹಿಡಿಯುವ ನಿರೀಕ್ಷೆಯಿದೆ.

ನಡ್ಡಾ ಅವರು 2020ರ ಜನವರಿಯಲ್ಲಿ ಪಕ್ಷದ ಅಧ್ಯಕ್ಷರಾಗುವ ಮೂಲಕ ಅಮಿತ್‌ ಶಾ ಅವರನ್ನು ಬದಲಾಯಿಸಲಾಗಿತ್ತು. ಆದರೆ ಹಿಂದೆ ಪಕ್ಷವನ್ನು ಮುನ್ನಡೆಸಿದ ಇತರ ಮಂತ್ರಿಗಳಲ್ಲಿ ನಿತಿನ್‌ ಗಡ್ಕರಿ ಮತ್ತು ರಾಜನಾಥ್‌ ಸಿಂಗ್‌ ಸೇರಿದ್ದಾರೆ. ಬಿಜೆಪಿ ಮುಖ್ಯಸ್ಥರಾಗಿ ನಡ್ಡಾ ಅವರ ವಿಸ್ತೃತ ಅವಧಿ ಈ ತಿಂಗಳಿಗೆ ಕೊನೆಗೊಳ್ಳಲಿದೆ.

RELATED ARTICLES

Latest News