ಬೆಂಗಳೂರು,ಜೂ.10-ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ನೀತಿ ಸಂಹಿತೆಯನ್ನು ಸಂಪೂರ್ಣ ತೆರವುಗೊಳಿಸಿರುವುದಾಗಿ ಭಾರತದ ಚುನಾವಣಾ ಆಯೋಗ ತಿಳಿಸಿದೆ.
ಮಾ.16 ರಂದು ಲೋಕಸಭಾ ಚುನಾವಣೆ ಘೋಷಣೆಯಾದಂದಿನಿಂದಲೂ ದೇಶಾದ್ಯಂತ ಜಾರಿಯಲ್ಲಿದ್ದಂತೆ ರಾಜ್ಯದಲ್ಲೂ ನೀತಿ ಸಂಹಿತೆ ಇತ್ತು. ಜೂ.4 ಕ್ಕೆ ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟವಾಗಿದ್ದರೂ ಜೂ.6ರವರೆಗೂ ಚುನಾವಣಾ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದವು. ಅದು ಮುಗಿದ ಬೆನ್ನಲ್ಲೇ ಪದವೀಧರ ಹಾಗೂ ಶಿಕ್ಷಕರ 6 ಕ್ಷೇತ್ರಗಳಿಗೆ ನಡೆಯುತ್ತಿದ್ದ ಚುನಾವಣೆಗಳ ನೀತಿ ಸಂಹಿತೆ ಮುಂದುವರೆದಿತ್ತು.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯಸರ್ಕಾರದ ಮನವಿಯ ಮೇರೆಗೆ ಭಾಗಶಃ ನೀತಿಸಂಹಿತೆಯನ್ನು ಆಯೋಗ ಸಡಿಲಿಸಿತ್ತಾದರೂ ಯಾವುದೇ ಘೋಷಣೆ ಹಾಗೂ ನಿರ್ಧಾರಗಳನ್ನು ಪ್ರಕಟಿಸಲು ಅವಕಾಶ ಇರಲಿಲ್ಲ. ಸಚಿವ ಸಂಪುಟ ಸಭೆ ನಡೆಸಲು ನಿರ್ಬಂಧಗಳಿದ್ದವು.
ವಿಧಾನಸಭೆಯಿಂದ ವಿಧಾನಪರಿಷತ್‌ಗೆ 11 ಸದಸ್ಯರ ಆಯ್ಕೆ, ಶಿಕ್ಷಕರ, ಪದವೀಧರರ 6 ಕ್ಷೇತ್ರಗಳ ಚುನಾವಣೆ ಸೇರಿದಂತೆ ಎಲ್ಲಾ ಫಲಿತಾಂಶಗಳು ಪ್ರಕಟಗೊಂಡಿದ್ದರಿಂದ ನೀತಿ ಸಂಹಿತೆಯನ್ನು ತೆರವು ಮಾಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.