ನವದೆಹಲಿ, ಜೂ.10- ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿದ್ದು, ಜು.10ರಂದು ಮತದಾನ ನಡೆದು ಜುಲೈ 13ರಂದು ಫಲಿತಾಂಶ ಪ್ರಕಟವಾಗಲಿದೆ. ವಿವಿಧ ಕಾರಣಗಳಿಂದಾಗಿ ತೆರವಾಗಿದ್ದ ಒಟ್ಟು 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಜೂ.14ರಂದು ಅಧಿಸೂಚನೆ ಹೊರಡಲಿದ್ದು, ಜೂ.21ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ.
ಜೂ.24 ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜೂ.26 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಜುಲೈ 10ರಂದು ಮತದಾನ ನಡೆದು 13ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಬಿಹಾರದಲ್ಲಿ ಭೀಮಾ ಭಾರತಿ ಅವರ ರಾಜೀನಾಮೆ ತೆರವಾಗಿದ್ದ ರೂಪೌಲಿ, ಪಶ್ಚಿಮ ಬಂಗಾಳದ ಕೃಷ್ಣ ಕಲ್ಯಾಣಿ ಅವರಿಂದ ತೆರವಾಗಿದ್ದ ರಾಯ್‌ಗಂಜ್, ಡಾ.ಮುಕುಟ್‌ಮಣಿ ಅಧಿಕಾರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ರಂಗಟ್ ದಕ್ಷಿಣ್(ಮೀಸಲು), ಸಾದನ್‌ಪಾಂಡೆ ಅವರ ನಿಧನದಿಂದ ತೆರವಾಗಿದ್ದ ಮಣಿಕ್‌ತಳ ಹಾಗೂ ಬಿಸ್ವಾಜಿತ್ ದಾಸ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಬಾಗಡ(ಮೀಸಲು) ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಇನ್ನು ತಮಿಳುನಾಡಿನಲ್ಲಿ ಶಾಸಕ ತಿರು.ಎನ್. ಪುಗತೇಂದಿ ನಿಧನದಿಂದ ತೆರವಾಗಿರುವ ವಿಕ್ರವಾಂಡಿ, ಮಧ್ಯಪ್ರದೇಶದಲ್ಲಿ ಕಮಲೇಶ್ ಪ್ರತಾಪ್ ಶಾಕ್ ಅವರ ರಾಜೀನಾಮೆಯಿಂದ ತೆರವಾಗಿರುವ ಅಮರವಾರ, ಉತ್ತರಖಂಡ್‌ನಲ್ಲಿ ಶಾಸಕ ರಾಜೇಂದ್ರಸಿಂಗ್ ಭಂಡಾರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಬದ್ರಿನಾಥ್ ಹಾಗೂ ಶಾಸಕ ಸರ್ವಥ್ ಕರೀಂ ಅನ್ಸಾರಿ ನಿಧನದಿಂದ ತೆರವಾಗಿದ್ದ ಮಂಗಿಯಾರ್, ಪಂಜಾಬ್‌ನ ಶೀತಲ್, ಅಂಗುರಲ್ ರಾಜೀನಾಮೆಯಿಂದ ಜಲದಂರ್ ಪಶ್ಚಿಮ ಹಾಗೂ ಹಿಮಾಚಲಪ್ರದೇಶದಲ್ಲಿ ಶಾಸಕರಾಗಿದ್ದ ಹೋಶಿಯಾರ್ ಸಿಂಗ್ (ಡೆಹ್ರಾ), ಅಶೀಸ್ ಶರ್ಮ ರಾಜೀನಾಮೆಯಿಂದ ತೆರವಾಗಿದ್ದ ಅಮೀರ್‌ಪುರ್‌ಗೆ ಉಪಚುನಾವಣೆ ನಡೆಯಲಿದೆ.