ಬೆಂಗಳೂರು,ಜೂ.11- ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ಪರಿಗಣಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪನೂಲ ಕ್ರೂಢೀಕರಣದಲ್ಲಿ ಗುರಿ ಸಾಧಿಸದೇ ಇದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಲೋಕಸಭೆ ಹಾಗೂ ವಿಧಾನಸಭೆಯ ಚುನಾವಣೆ ಮುಗಿದು, ನೀತಿಸಂಹಿತೆ ಮುಕ್ತಾಯಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಪನೂಲ ಕ್ರೂಢೀಕರಣ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದು, ಕಳೆದ ಎರಡು ಮೂರು ತಿಂಗಳಿನಿಂದಲೂ ಕೆಲಸ ಮರೆತಿದ್ದ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.
ಸಂಪನೂಲ ಸಂಗ್ರಹದಲ್ಲಿ ಮುಂಚೂಣಿ ಇಲಾಖೆಯಾಗಿರುವ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಆರಂಭದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಯವರು ವಿಭಾಗವಾರು ತೆರಿಗೆ ಸಂಗ್ರಹದ ಕುರಿತು ವಿವರಣೆ ಪಡೆದುಕೊಂಡಿದ್ದಾರೆ.
ಗುರಿ ಸಾಧಿಸದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ವರ್ಗಾವಣೆ ವೇಳೆ ನಿಮ ಕಾರ್ಯಕ್ಷಮತೆಯೇ ಮಾನದಂಡ. ಬೇರೆ ಯಾವ ಪ್ರಭಾವಕ್ಕೂ ನಾನು ಮಣೆ ಹಾಕಲ್ಲ. ಅಂದಾಜು, ಜಾರಿ, ಮೇಲನವಿ ತಂಡಗಳು ನಿರಂತರ ಸಹಕಾರದಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಚುನಾವಣೆ ಸಂಹಿತೆ ಕಾರಣಕ್ಕಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ನಿರೀಕ್ಷಿತ ಪ್ರಮಾಣದ ಸಂಪನೂಲ ಸಂಗ್ರಹವಾಗಿಲ್ಲ ಎಂದು ಹೇಳಲಾಗಿದೆ. ಅದರಲ್ಲೂ ಬಹಳಷ್ಟು ಹಿರಿಯ ಅಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಹೀಗಾಗಿ ಇಲಾಖೆಯ ಕೆಲಸ ಆಮೆಯ ವೇಗದಲ್ಲಿ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
ಇಂದಿನ ಸಭೆಯಲ್ಲಿ ಪ್ರತಿ ಹಂತದಲ್ಲೂ ಅಧಿಕಾರಿಗಳ ಆಡಳಿತದ ನಿರ್ಲಕ್ಷ್ಯವನ್ನು ಮುಖ್ಯಮಂತ್ರಿಯವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಿಗದಿತ ಗುರಿ ತಲುಪಬೇಕು, ಯಾವುದೇ ನೆಪ ಹೇಳಬಾರದು ಎಂದು ಸೂಚಿಸಿದ್ದಾರೆ.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿಗಳಾದ ಜಾಫರ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ ಸಭೆಯಲ್ಲಿ ಉಪಸ್ಥಿತರಿದ್ದರು.
ನಂತರದಲ್ಲಿ ಅಬಕಾರಿ, ಗಣಿ ಮತ್ತು ಭೂ ವಿಜ್ಞಾನ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಇಲಾಖೆಗಳ ಅಧಿಕಾರಿಗಳೊಂದಿಗೂ ಮುಖ್ಯಮಂತ್ರಿ ಸಮಾಲೋಚನೆ ನಡೆಸಿದ್ದಾರೆ.